ಶಿಕ್ಷಣವಿದ್ದರೆ ಬದುಕಿನಲ್ಲಿ ಸೋಲಿಲ್ಲ: ಪ್ರೊ.ಪಿ.ಎಲ್.ಧರ್ಮ

ಮಂಗಳೂರು, ಜ.24: ಬಡವರ ಬದುಕಿಗೆ ಶಿಕ್ಷಣ ಆಶಾಕಿರಣವಾಗಿದೆ. ಎಷ್ಟೇ ಕಷ್ಟ ಇದ್ದರೂ, ಭಿಕ್ಷೆ ಬೇಡಿಯಾದರೂ ತಮ್ಮ ಮಕ್ಕಳಿಗೆ ಯೋಗ್ಯ ಶಿಕ್ಷಣ ಒದಗಿಸಬೇಕು. ಶಿಕ್ಷಣ ಇದ್ದರೆ ನಮಗೆ ಬದುಕಿನಲ್ಲಿ ಸೋಲು ಉಂಟಾಗದು ಎಂದು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ. ಪ್ರೊ. ಪಿ.ಎಲ್. ಧರ್ಮ ಹೇಳಿದ್ದಾರೆ.
ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ನಡೆದ ಮಂಗಳೂರಿನ ಭಾರತ್ ಸೋಷಿಯಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್(ರಿ)ನ ದಶಮಾನೋತ್ಸವ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮಲ್ಲಿ ನಂಬಿಕೆ, ಮೌಲ್ಯಗಳು ಕಡಿಮೆಯಾಗುತ್ತಿದೆ. ನಂಬಿಕೆ ಇಲ್ಲದ ವ್ಯವಸ್ಥೆಯಲ್ಲಿ ನಾವಿದ್ದೇವೆ. ಹೆತ್ತವರು ಮಕ್ಕಳಿಗೆ ಚಿಕ್ಕಂದಿನಲ್ಲೇ ಮೌಲ್ಯಗಳನ್ನು ಕಲಿಸಬೇಕು. ಮೌಲ್ಯಗಳು ಮನುಷ್ಯನ ಬದುಕಿನ ಪ್ರಮುಖ ಅಂಶವಾಗಬೇಕು ಎಂದರು.
ಭಾರತ್ ಸೋಷಿಯಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ಬಡವರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದೆ. ಶಿಕ್ಷಣಕ್ಕೆ ನೆರವು ನೀಡುತ್ತಿದೆ. ಸರಕಾರ ಮಾಡಬೇಕಾದ ಕೆಲಸವನ್ನು ಸರಕಾರದ ರೀತಿಯಲ್ಲೆ ಅಧಿಕಾರವನ್ನು ಬಳಸಿಕೊಳ್ಳದೆ ಬಡವರಿಗೆ ಬದುಕು ಕಟ್ಟಿಕೊಡುತ್ತಿದ್ದಾರೆ. ಅವರ ಬದುಕನ್ನು ಬದಲಾಯಿಸುತ್ತಿದ್ದಾರೆ ಎಂದರು
ನಮಗೆ ಯಾವುದೇ ಸವಾಲು ಕಷ್ಟ ಎದುರಾದರೂ ಮದ್ಯಪಾನ ಮತ್ತು ಡ್ರಗ್ಸ್ ಔಷಧವಾಗಬಾರದು. ಮಹಿಳೆಯರು ಶೋಷಣೆ ವಿರುದ್ಧ ನಿಲ್ಲಬೇಕು.ಮಕ್ಕಳನ್ನು ಮದ್ಯ, ಡ್ರಗ್ಸ್ , ದುಶ್ಚಟಕ್ಕೆ ಬಲಿಯಾಗದಂತೆ ಹೆತ್ತವರು ಎಚ್ಚರ ವಹಿಸಬೇಕು ಎಂದರು.
ಬಿಎಸ್‌ಡಬ್ಲ್ಯುಟಿ ಅಧ್ಯಕ್ಷ ಎನ್.ಅಮೀನ್ ಪಕ್ಕಲಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ನಿವೃತ್ತ ಅಧೀಕ್ಷಕ ಹರೀಶ್ ಕುಮಾರ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಮಾಜ ಸೇವಕ ಕೆ.ಪಿ. ಕರೀಮ್ ಬಿಎಸ್‌ಡಬ್ಲ್ಯುಟಿ ಡಾಕ್ಯುಮೆಂಟರಿ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಉಡುಪಿಯ ಸಮಾಜ ಸೇವಕ ದಿನೇಶ್ ಪೈ ಅವರಿಗೆ ಬಿಎಸ್‌ಡಬ್ಲ್ಯುಟಿ ವರ್ಷದ ವ್ಯಕ್ತಿ -2015 ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಭಾರತ್ ಸೋಷಿಯಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್‌ನ ಹನ್ನೊಂದನೆ ವರ್ಷದ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ಹೆತ್ತವರಿಗೆ ನಡೆಸಲಾದ ಕಾರ್ಯಾಗಾರದಲ್ಲಿ ಕಾರ್ಕಳದ ಕ್ರಿಯೇಟಿವ್ ಎಜುಕೇಷನಲ್ ಫೌಂಡೇಷನ್‌ನ ಸಹ ನಿರ್ದೇಶಕ ಅಶ್ವತ್ ಎಸ್.ಎಲ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಮಂಗಳೂರಿನ ಡಾ.ಪಿ.ದಯಾನಂದ ಪೈ-ಪಿ.ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಯ ಕರ ಭಂಡಾರಿ, ಸಮಾಜ ಸೇವಕರಾದ ಎನ್.ಶೀನ ಶೆಟ್ಟಿ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಅಶ್ವಿನಿ ಶೆಟ್ಟಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಅವಿನಾಶ್ ಕಾಮತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







