ಪ್ರಶ್ನಿಸುವ ಮನೋಭಾವನೆಯನ್ನು ಮಹಿಳೆಯರು ಬೆಳೆಸಬೇಕು: ಡಾ. ನರೇಂದ್ರ ನಾಯಕ್

ಮಂಗಳೂರು, ಜ.18: ಮಹಿಳೆಯರು ಸಮಾಜದಲ್ಲಿ ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಬೇಕು. ಮೌಢ್ಯತೆ ಯನ್ನು ಬಿತ್ತುವ ವಿಚಾರಕ್ಕೆ ಕಿವಿಕೊಡಲೇಬಾರದು. ವಿಜ್ಞಾನದಿಂದ ಮನುಷ್ಯರ ರೋಗಕ್ಕೆ ಆವಿಷ್ಕಾರ ಮಾಡಿ ನಿವಾರಣೆಯಾಗಿದೆಯೇ ವಿನಃ ಯಾವುದೇ ಪವಾಡದಿಂದ ಪರಿಹಾರವಾಗಿಲ್ಲ ಎಂದು ವಿಚಾರವಾದಿ ಡಾ. ನರೇಂದ್ರ ನಾಯಕ್ ಹೇಳಿದರು.
ಜನವಾದಿ ಮಹಿಳಾ ಸಂಘಟನೆಯ ದ.ಕ.ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ರವಿವಾರ ನಗರದ ವಿಕಾಸದಲ್ಲಿ ನಡೆದ ಮಹಿಳೆಯರು ಮತ್ತು ವೈಜ್ಣಾನಿಕ ಮನೋಭಾವ ಎಂಬ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತಾಡುತ್ತಿದ್ದರು.
ಜ್ಯೋತಿಷ್ಯದಿಂದ ಇತರರ ಕಷ್ಟಕ್ಕೆ ದಾರಿ ತೋರಿಸುವವರು ತಮ್ಮ ಪರಿಹಾರಕ್ಕೆ ವಿಜ್ಞಾನದ ಮೊರೆ ಹೋಗುತ್ತಾರೆ. ಜ್ಯೋತಿಷ್ಯ ಜನರನ್ನು ಮೋಸ ಮಾಡುವ ಒಂದು ದಂಧೆಯಾಗಿದೆ. ಮಹಿಳೆಯರು ಮೌಢ್ಯ ಮತ್ತು ಮೂಢನಂಬಿಕೆ ಯಿಂದ ಹೊರಬಂದು ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಂಡಾಗ ಪ್ರಗತಿ ಹೊಂದಲು ಸಾಧ್ಯವಿದೆ. ವಿಜ್ಞಾನವು ಸಮಾಜದ ಪ್ರಗತಿಯ ಅಭಿವೃದ್ಧಿಯ ಸಂಕೇತವಾಗಿದೆ. ಶಿಕ್ಷಣವು ಪದವಿ ಪಡೆಯಲು ಮಾತ್ರವಲ್ಲ. ವಿಮರ್ಶೆ ಮತ್ತು ಆಲೋಚನಾ ಮಟ್ಟ ಎತ್ತರಿಸಲು ದಾರಿಯಾಗಬೇಕು ಎಂದು ಡಾ. ನರೇಂದ್ರ ನಾಯಕ್ ಅಭಿಪ್ರಾಯಪಟ್ಟರು.
ಜನವಾದಿ ಮಹಿಳಾ ಸಂಘಟನೆಯ ದ.ಕ.ಜಿಲ್ಲಾಧ್ಯಕ್ಷೆ ಕಿರಣ ಪ್ರಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಜಯಂತಿ ಬಿ ಶೆಟ್ಟಿ, ಮಾಧುರಿ ಬೋಳಾರ್, ಅಸುಂತ ಡಿಸೋಜ, ಗೀತಾ ಸುರತ್ಕಲ್, ಲೋಲಾಕ್ಷಿ, ಭಾರತಿ ಬೋಳಾರ, ಜಯಶ್ರೀ, ಯೋಗೀಶ್ ಜಪ್ಪಿನಮೊಗರು, ಕೃಷ್ಣ ತಣ್ಣೀರುಬಾವಿ, ತೈಯೂಬ್ ಮತ್ತಿತರರು ಪಾಲ್ಗೊಂಡಿದ್ದರು. ಜಿಲ್ಲಾ ಕಾರ್ಯದರ್ಶಿ ಪ್ರಮಿಳಾ ಶಕ್ತಿನಗರ ಸ್ವಾಗತಿಸಿದರು.







