WSO ಇಂಡಿಯಾ ಅವಾರ್ಡ್ಸ್ 2025 : ಬ್ಯಾರೀಸ್ ಗ್ರೂಪ್‌ಗೆ ಮೂರು ಪ್ರಮುಖ ಪ್ರಶಸ್ತಿಗಳು

ಮಂಗಳೂರು: ಸುರಕ್ಷತೆ, ಸುಸ್ಥಿರ ನಿರ್ಮಾಣ ಮತ್ತು ನಾಯಕತ್ವ ಕ್ಷೇತ್ರಕ್ಕೆ ನೀಡಿದ ಪ್ರಮುಖ ಕೊಡುಗೆಗಳಿಗಾಗಿ ಬ್ಯಾರೀಸ್ ಗ್ರೂಪ್ 2025ರ WSO ಇಂಡಿಯಾ ಅವಾರ್ಡ್ ನಲ್ಲಿ ಮೂರು ಪ್ರಮುಖ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಅ. 14ರಂದು ಮುಂಬೈನ ಲಲಿತ್ ಹೋಟೆಲ್‌ನಲ್ಲಿ ನಡೆದ WSO ಇಂಡಿಯಾದ 6ನೇ ವರ್ಷದ OHS&E ವೃತ್ತಿಪರ ಅಭಿವೃದ್ಧಿ ವಿಚಾರ ಸಂಕಿರಣ ಮತ್ತು 4ನೇ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬ್ಯಾರೀಸ್ ಗ್ರೂಪ್, ದೇಶದ ಪ್ರಶಸ್ತಿ ವಿಜೇತ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಚೆನ್ನೈನ ಅಂಬತ್ತೂರಿನಲ್ಲಿ ಬ್ಯಾರೀಸ್ ಅಭಿವೃದ್ಧಿಪಡಿಸಿದ NTT ಡೇಟಾ ಸೆಂಟರ್ (DC2B) ಆಕ್ಯುಪೇಶನಲ್ ಹೆಲ್ತ್, ಸೇಫ್ಟಿ & ಎನ್ವಿರಾನ್ ಮೆಂಟ್ ವಿಭಾಗದಲ್ಲಿ ಅತ್ಯುನ್ನತ ಪ್ಲಾಟಿನಮ್ 5-ಸ್ಟಾರ್ ಅವಾರ್ಡ್ ಪಡೆದಿದೆ.
ನವಿ ಮುಂಬೈನ ಮಹಾಪೆಯಲ್ಲಿರುವ ಬ್ಯಾರೀಸ್ ಗ್ರೂಪ್ ನಿರ್ಮಿಸಿರುವ NTT ಡೇಟಾ ಸೆಂಟರ್ (NAV1C) ಅದೇ ವಿಭಾಗದಲ್ಲಿ ಉತ್ತಮ ಸಾಧನೆಗಾಗಿ ಗೋಲ್ಡ್ 4-ಸ್ಟಾರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಈ ಯೋಜನಾ ಹಂತದ ಪ್ರಶಸ್ತಿಗಳ ಜೊತೆಗೆ, ಬ್ಯಾರೀಸ್ ಗ್ರೂಪ್‌ನ ಸ್ಥಾಪಕ ಹಾಗು ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಅವರಿಗೆ WSO ಇಂಡಿಯಾ ವತಿಯಿಂದ “ನಾಯಕತ್ವ ಕ್ಷೇತ್ರದಲ್ಲಿನ ಅಮೋಘ ಸಾಧನೆ”ಗಾಗಿ ಪ್ರಶಸ್ತಿಯನ್ನು ನೀಡಲಾಗಿದೆ. ಈ ಗೌರವವು ಅವರ ಅಸಾಧಾರಣ ನಾಯಕತ್ವ, ಪರಿಸರ ಸ್ನೇಹಿ ದೃಷ್ಟಿಕೋನ ಮತ್ತು ಸುರಕ್ಷತೆ, ಹಸಿರೀಕರಣಕ್ಕೆ ಆದ್ಯತೆ ನೀಡುವ ಅವರ ಜೀವಮಾನದ ಕೊಡುಗೆಗಳಿಗಾಗಿ ನೀಡಲಾಗಿದೆ.
ಈ ಪ್ರಶಸ್ತಿಗಳನ್ನು “ಹ್ಯಾಟ್ರಿಕ್ ಆಫ್ ಎಕ್ಸಲೆನ್ಸ್” ಎಂದು ಬಣ್ಣಿಸಿದ ಬ್ಯಾರೀಸ್ ಗ್ರೂಪ್, ಸುಸ್ಥಿರ ನಿರ್ಮಾಣದೆಡೆಗಿನ ತನ್ನ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದೆ. ದೇಶಾದ್ಯಂತ ತನ್ನ ಯೋಜನೆಗಳಲ್ಲಿ ನಾವಿನ್ಯತೆ , ಪ್ರಾಮಾಣಿಕ ಸೇವೆ ಹಾಗು ಸುರಕ್ಷತೆ ಬ್ಯಾರೀಸ್ ಗ್ರೂಪ್ ನ ಎಲ್ಲ ನಿರ್ಮಾಣಗಳ ಬುನಾದಿಯಾಗಿವೆ ಎಂದು ಪ್ರಕಟಣೆ ತಿಳಿಸಿದೆ.







