ಜೂ.1 ರಂದು ಯಕ್ಷಧ್ರುವ ಪಟ್ಲ ದಶಮ ಸಂಭ್ರಮ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಆಶ್ರಯದಲ್ಲಿ ಜೂನ್ 1 ರಂದು ಅಡ್ಯಾರ್ ಗಾರ್ಡನ್ ನಲ್ಲಿ ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025 ರಾಷ್ಟ್ರೀಯ ಕಲಾ ಸಮ್ಮೇಳನ ನಡೆಯಲಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರು ಪಟ್ಲಗುತ್ತು ಸತೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ
ರಾಷ್ಟ್ರೀಯ ಕಲಾ ಸಮ್ಮೇಳನ ಬೆಳಿಗ್ಗೆ 9.30 ರಿಂದ ರಾತ್ರಿ 11 ರ ವರೆಗೆ ನಡೆಯಲಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ಆಶೀರ್ವವಚನ ನೀಡಲಿದ್ದಾರೆ. ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಶಶಿ ಕೇಟರಸ್೯, ಹೊಟೇಲ್ ಕಾಶಿ ಪ್ಯಾಲೇಸ್ ನ ಮಾಲಕ, ಉದ್ಯಮಿ ಶಶಿಧರ ಬಿ ಶೆಟ್ಟಿ ವಹಿಸಲಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವರವರ ಉಪಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ರಾಷ್ಟ್ರೀಯ ಕಲಾ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಡಾ ಮೋಹನ್ ಆಳ್ವರವರ ನಿರ್ದೇಶನ ಮತ್ತು ಸಂಯೋಜನೆಯಲ್ಲಿ ಭಾರತದ 8 ಶಾಸ್ತ್ರೀಯ ಕಲೆಗಳ ಪ್ರದರ್ಶನ, ಯಕ್ಷಗಾನ ಹಾಗೂ ಭಾರತೀಯ ಕಲೆಗಳ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ ಎಂದವರು ತಿಳಿಸಿದ್ದಾರೆ.
ಮಧ್ಯಾಹ್ನ 1 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ಆಶೀರ್ವಚನ ಮಾಡಲಿದ್ದಾರೆ. ಎಂಆರ್ ಜಿ ಗ್ರೂಪ್ ನ ಸಿಎಂಡಿ ಡಾ ಕೆ ಪ್ರಕಾಶ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭಕ್ಕೆ ಖ್ಯಾತ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ತಾರಾ ಮೆರುಗು ನೀಡಲಿದ್ದಾರೆ.
ಸಂಜೆ 5.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಉಪಸ್ಥಿತಿಯಲ್ಲಿ ಮುಂಬೈ ಹೇರಂಭ ಇಂಡಸ್ಟ್ರೀಸ್ ನ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು 2025 ರ ಯಕ್ಷಧ್ರುವ ಕಲಾ ಗೌರವ ನೀಡಿ ಗೌರವಿಸಲಾಗುವುದು.
2025 ರ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಚಂದ್ರಿಕಾ ಶೆಟ್ಟಿ ದಂಪತಿಗಳಿಗೆ ನೀಡಿ ಗೌರವಿಸಲಾಗುವುದು.
2025 ರ ಯಕ್ಷಧ್ರುವ ಪಟ್ಲ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಭಾಗವತ, ವಿದ್ವಾಂಸ ಕುರಿಯ ಗಣಪತಿ ಶಾಸ್ತ್ರಿಯವರಿಗೆ ನೀಡಿ ಸನ್ಮಾನಿಸಲಾಗುವುದು.
ರಾಷ್ಟ್ರೀಯ ಕಲಾ ಸಮ್ಮೇಳನದಲ್ಲಿ ಎಂಟು ತಂಡಗಳಿಂದ ತೆಂಕು ಮತ್ತು ಬಡಗು ತಿಟ್ಟಿನ ಯುವ ಕಲಾವಿದರಿಂದ ಯಕ್ಷಗಾನ ಸ್ಪರ್ಧೆ ನಡೆಯಲಿದೆ.
15 ಕೋಟಿ ರೂ ಮೊತ್ತದ ಸೇವಾ ಯೋಜನೆ
ಕಳೆದ 10 ವರ್ಷಗಳಲ್ಲಿ 15 ಕೋಟಿ ರೂ ಮೊತ್ತದ ಸೇವಾ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
ದಶಮ ಪಟ್ಲ ಸಂಭ್ರಮ 2025ರ ಸೇವಾ ಯೋಜನೆಗಳು
ಪಟ್ಲ ಪ್ರಶಸ್ತಿ - ₹1 ಲಕ್ಷ ಗೌರವಧನದೊಂದಿಗೆ, ಯಕ್ಷಗಾನ ಸಹಿತ ವಿವಿಧ ಕ್ಷೇತ್ರಗಳ ಹಿರಿಯ 16 ಸಾಧಕರಿಗೆ ಯಕ್ಷಧ್ರುವ ಕಲಾ ಗೌರವ - ತಲಾ ₹20,000 ನಗದಿನೊಂದಿಗೆ ವೈದ್ಯಕೀಯ ಆರ್ಥಿಕ ನೆರವು, ಉಚಿತ ವೈದ್ಯಕೀಯ ತಪಾಸಣೆ, ಕಣ್ಣಿನ ತಪಾಸಣೆ, ಕನ್ನಡಕ ಹಾಗೂ ಔಷಧ ವಿತರಣೆ, ಅಶಕ್ತ ಕಲಾವಿದರಿಗೆ ಗೃಹ ನಿರ್ಮಾಣಕ್ಕೆ ಸಹಾಯಧನ, 86 ಸರಕಾರಿ ಪ್ರೌಡಾಶಾಲೆಗಳ 9500 ವಿದ್ಯಾರ್ಥಿಗಳಿಗೆ - ಯಕ್ಷಶಿಕ್ಷಣ ಯೋಜನೆ ಅಪಘಾತ ವಿಮಾ ಯೋಜನೆ.
ಕನಸಿನ ಯೋಜನೆ
ನಿವೇಶನ ರಹಿತ 100 ಮಂದಿ ಕಲಾವಿದರಿಗೆ ಉಚಿತ 100 ಮನೆಗಳ ನಿರ್ಮಾಣ ʼಪಟ್ಲ ಯಕ್ಷಾಶ್ರಯʼ ಯೋಜನೆಯಾಗಿದೆ.
ಯಕ್ಷಧ್ರುವ ಯಕ್ಷಶಿಕ್ಷಣ
ಯಕ್ಷಗಾನ ಲೋಕದಲ್ಲಿ ಹೊಸ ಯಕ್ಷಗಾನ ಕಲಾವಿದರನ್ನು, ಕಲಾಸಕ್ತರನ್ನು ಸುಸಂಸ್ಕೃತ ಪ್ರೇಕ್ಷಕರನ್ನು ಹುಟ್ಟುಹಾಕುವ ಒಂದು ಪ್ರಗತಿಯುತ ಹೆಜ್ಜೆಯೇ ಯಕ್ಷಧ್ರುವ-ಯಕ್ಷಶಿಕ್ಷಣ ಯೋಜನೆ. ಹಿರಿಯ ಕಲಾವಿದರ ಮಾರ್ಗದರ್ಶನದ ಮೇರೆಗೆ ಪ್ರಸ್ತುತ ಕಾಲಘಟ್ಟದ ಒಟ್ಟು 48 ಯಕ್ಷಗಾನ ಶಿಕ್ಷಕರು ರಾಜ್ಯದ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಯಕ್ಷಶಿಕ್ಷಣದ ತರಗತಿ ನಡೆಸುತ್ತಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಒಟ್ಟು 87 ಶಾಲೆಗಳ ಸುಮಾರು 6500 ವಿದ್ಯಾರ್ಥಿಗಳು ಯಕ್ಷಗಾನ ಶಿಕ್ಷಣವನ್ನು ಪಡೆಯುತ್ತಿರುವುದು ಮಾತ್ರವಲ್ಲದೆ ಅದರಲ್ಲಿ ಸುಮಾರು 4000 ವಿದ್ಯಾರ್ಥಿಗಳ ಯಕ್ಷಗಾನ ರಂಗಪ್ರವೇಶವೂ ಈಗಾಗಲೇ ನಡೆದಿದೆ. ಈ ಯೋಜನೆಯು ಮುಖ್ಯವಾಗಿ ಸರಕಾರಿ ಶಾಲಾ ಮಕ್ಕಳ ಅಭ್ಯುದಯವನ್ನೇ ಕೇಂದ್ರವನ್ನಾಗಿರಿಸಿಕೊಂಡಿದೆ. ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ಶಾಲಾ ಅವಧಿಯಲ್ಲಿ ಶಾಲಾ ಶಿಕ್ಷಣದ ಅಂಗವಾಗಿ ಯಕ್ಷ ಶಿಕ್ಷಣದ ತರಗತಿಗಳು ನಡೆಯುತ್ತಿದ್ದು ಯಕ್ಷಗಾನ ಕಲೆಯ ಮೂಲಕ ಸಂಸ್ಕೃತಿ ಮತ್ತು ಭಾಷೆಯ ಉಳಿವು-ಬೆಳವಣಿಗೆಯತ್ತ ಈ ಯೋಜನೆ ಮುಖ ಮಾಡಿದೆ. ಯಕ್ಷಗಾನ ಕಲೆಯ ಅಭ್ಯಾಸದಿಂದಾಗಿ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯಾಭಿವೃದ್ಧಿಯ ಜೊತೆಗೆ ಮಕ್ಕಳಲ್ಲಿ ಆತ್ಮಸ್ಥೆರ್ಯ ಉದ್ದೀಪನವಾಗಲಿದೆ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಜತೆ ಕಾರ್ಯದರ್ಶಿಗಳಾದ ರವಿಚಂದ್ರ ಶೆಟ್ಟಿ ಅಶೋಕನಗರ, ರಾಜೀವ್ ಪೂಜಾರಿ ಕೈಕಂಬ ಮತ್ತು ಉದಯಕುಮಾರ್ ಶೆಟ್ಟಿ. ಉಪಸ್ಥಿತರಿದ್ದರು.







