ಯಕ್ಷಗುರು, ನಿವೃತ್ತ ಅಧ್ಯಾಪಕ ಕೈರಂಗಳ ನಾರಾಯಣ ಹೊಳ್ಳ ನಿಧನ
ಕೊಣಾಜೆ: ಸಕಲವಿದ್ಯಾ ಪಾರಂಗತ, ಹಲವು ಕಲಾವಿದರ ಬೆಳವಣಿಗೆಗೆ ಕಾರಣಕರ್ತರಾಗಿದ್ದ ಯಕ್ಷಗುರು, ಕೈರಂಗಳ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಅಧ್ಯಾಪಕ ಕೈರಂಗಳ ನಾರಾಯಣ ಹೊಳ್ಳ (93) ಮಂಗಳವಾರ ಬೆಳಗ್ಗೆ ಸ್ವಗೃಹ ಧರ್ಮಕ್ಕಿಯಲ್ಲಿ ನಿಧನರಾದರು.
ಕೈರಂಗಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಹಾಗೂ ವಿಹ್ಞಾನ ಶಿಕ್ಷಕರಾಗಿ ಹಲವು ದಶಕಗಳ ಸೇವೆ ಸಲ್ಲಿಸಿ ನಿವೃತ್ತರಾ ಗಿದ್ದರು. ಅದರ ಜತೆಗೆ ಕೈರಂಗಳದ ಪೋಸ್ಟ್ ಮಾಸ್ಟರ್ ಆಗಿಯೂ ಸೇವೆ ಸಲ್ಲಿಸಿದ್ದ ಅವರು ಕೆಲವೊಂದು ನಿರ್ದಿಷ್ಟ ಕಾಯಿಲೆ ಗಳಿಗೆ ಹೋಮಿಯೋಪಥಿ ಔಷಧಿ ನೀಡುತ್ತಿದ್ದರು.
ಯಕ್ಷಗುರುವಾಗಿ, ಸಂಘಟಕರಾಗಿ, ಪೋಷಕರಾಗಿ ಹೊಸಹಿತ್ಲು ಮಹಾಲಿಂಗ್ ಭಟ್, ಆನೆಗುಂಡಿ ಗಣಪತಿ ಭಟ್, ಕೃಷ್ಣ ಮಾಸ್ತರ್ ಅವರ ಸೇವೆಯನ್ನು ಈ ಸಂಘ ನೆನಪಿಸಿಕೊಂಡಂತೆ ಹೊಳ್ಳರ ಅಪಾರ ಕಾಳಜಿಯಿಂದ ಕೈರಂಗಳ ಯಕ್ಷಗಾನ ಸಂಘವು ಸ್ವಂತ ಕಟ್ಟಡ ಹೊಂದುವಲ್ಲಿ, ಕಲಾವಿದರನ್ನು ರೂಪಿಸುವಲ್ಲಿ, ಬೌದ್ಧಿಕ ವಿಕಾಸಕ್ಕೆ ಕಮ್ಮಟಗಳನ್ನು ಏರ್ಪಡಿಸುತ್ತಾ ಬಯಲಾಟ, ತಾಳಮದ್ದಳೆಗಳನ್ನು ಆಯೋಜಿಸಿತ್ತಾ ಬರಲು ಕಾರಣಕರ್ತರಾಗಿದ್ದು ಸ್ವಂತದ್ದಾದ ವೇಷಭೂಷಣಗಳನ್ನು ಹೊಂದಿದ ಕೀರ್ತಿಗೆ ಈ ಸಂಘ ಪಾತ್ರವಾಗುವಲ್ಲಿ ಹೊಳ್ಳರ ಶ್ರಮ ಇದೆ. ಯಕ್ಷಗಾನದ ಸಮಗ್ರ ದರ್ಶನವನ್ನು ಹಳ್ಳಿಯಲ್ಲಿ ಪಸರಿಸುವಲ್ಲಿ, ದೂರದೂರಿನ ಕಲಾ ಮನಸ್ಸುಗಳನ್ನು ತನ್ನ ಸೂರಿನಡಿ ತರುವಲ್ಲಿ ಶ್ರಮಿಸಿದ್ದಾರೆ.
ಇವರಿಗೆ ಪುತ್ರಿ ಹಾಗೂ ಇಬ್ಬರು ಪುತ್ರರು ಇದ್ದಾರೆ.