ಯೆನೆಪೋಯ ವೈದ್ಯಕೀಯ ಕಾಲೇಜು ವತಿಯಿಂದ ವಿಶ್ವ ಆತಹತ್ಯೆ ತಡೆ ದಿನಾಚರಣೆ

ಕೊಣಾಜೆ: ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವತಿಯಿಂದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯ ಅಂಗವಾಗಿ ಮನೋರೋಗ ಚಿಕಿತ್ಸಾ ವಿಭಾಗದ ಆಶ್ರಯದಲ್ಲಿ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು.
ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವ್ಯೆದ್ಯಕೀಯ ಅಧೀಕ್ಷಕರಾದ ಡಾ. ಹಬೀಬ್ ರೆಹಮಾನ್ ಕಾರ್ಯಕ್ರಮ ಉದ್ಘಾಟಿಸಿ, ಆತ್ಮಹತ್ಯೆಯಂತಹ ಆಲೋಚನೆಗಳು ಮನಸ್ಸಿನಲ್ಲಿ ಮೂಡಿಬಂದಾಗ ನಮ್ಮ ಆತ್ಮೀಯ ಮಿತ್ರರಲ್ಲಿ ವಿಷಯವನ್ನು ಮುಕ್ತವಾಗಿ ಸಮಾಲೋಚಿಸಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಮನೋರೋಗ ಚಿಕಿತ್ಸಾ ವಿಭಾಗದ ವೈದ್ಯರುಗಳಾದ ಡಾ. ಮನು ಆನಂದ್ ಮತ್ತು ಡಾ. ಪಿಎಮ್‍ಎ ನಿಶಾದ್ ಅವರು ಮಾತನಾಡಿ, ಆತ್ಮಹತ್ಯೆಯಂತಹ ಪಿಡುಗನ್ನು ಪರಿಣಿತ ವೈದ್ಯರುಗಳಾದ ಮನೋರೋಗ ಚಿಕಿತ್ಸಾ ತಜ್ಞರು, ಮನಶಾಸ್ತ್ರ ತಜ್ಞರು ನೀಡುವಂತಹ ಸಲಹೆ ಮತ್ತು ಚಿಕಿತ್ಸೆಗಳಿಂದ ಹೇಗೆ ತಡೆಗಟ್ಟಬಹುದೆಂಬ ಬಗ್ಗೆ ಮಾಹಿತಿಗಳನ್ನು ನೀಡಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಬಯೋಕೆಮೆಸ್ಟ್ರಿ ವಿಭಾಗದ ಮುಖ್ಯಸ್ಥರಾದ ಡಾ. ರಾಘವೇಂದ್ರ ಉಪಾದ್ಯಾಯ, ಮುಖ್ಯ ನರ್ಸಿಂಗ್ ಅಧಿಕಾರಿ ಬ್ರಿಡ್ಜೆಟ್ ಡಿ ಸಿಲ್ವ, ಆಸ್ಪತ್ರೆಯ ಆಡಳಿತ ವಿಭಾಗದ ಉಪ ಕಾರ್ಯ ನಿರ್ವಹಣಾ ಅಧಿಕಾರಿ ಮೊಹಮ್ಮದ್ ಸಾಬಿತ್, ಆಸ್ಪತ್ರೆಯ ಗುಣಮಟ್ಟ ನಿರ್ವಹಣಾ ಅಧಿಕಾರಿ ಡಾ.ವಿಜೇತ ತಿಂಗಳಾಯ, ಸೀನಿಯರ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ವಿಜಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಮನೋರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಅನಿಲ್ ಕಾಕುಂಜೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸಹ ಪ್ರಾದ್ಯಾಪಕರಾದ ಡಾ. ರವಿಚಂದ್ರ ಕಾರ್ಕಳ್ ವಂದಣಾರ್ಪಣೆಗೈದರು. ಮಾರ್ಕೆಟಿಂಗ್ ವಿಭಾಗದ ಶಿವಪ್ರಸಾದ್ ನಿರೂಪಿಸಿದರು.
ಈ ಜಾಗ್ರತಿ ಕಾರ್ಯಕ್ರಮದಲ್ಲಿ ಆತ್ಮಹತ್ಯೆ ತಡೆ ಬಗ್ಗೆ ಉತ್ತಮ ಸಂದೇಶಗಳನ್ನು ಸಾರುವ ಪೋಸ್ಟರ್ ಗಳನ್ನು ಪ್ರದರ್ಶಿಸಿದ ಉಜಿರೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿಗಳಾದ ನೇಹ ಸಿ ಮತ್ತು ಅಪೂರ್ವ ಎಸ್ ಹಾಗೂ ಯೆನೆಪೋಯ ಮೆಡಿಕಲ್ ಕಾಲೇಜಿನ ಡಾ. ಖ್ಯಾತಿ ಮಹೇಂದ್ರ ಕೋಡಿಕನಿ ಇವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಯಿತು.







