ಅಡಿಕೆ ಕುರಿತಂತೆ ಕ್ಯಾಂಪ್ಕೊ ಅಧ್ಯಕ್ಷರ ಹೇಳಿಕೆಗೆ ಯೆನೆಪೊಯ ವಿವಿ ಸ್ಪಷ್ಟನೆ

ಮಂಗಳೂರು: ಅಡಿಕೆ ಕುರಿತಂತೆ ಯೆನೆಪೊಯ ಡೀಮ್ಡ್ ವಿವಿಯ ಸಂಶೋಧನಾ ಕೇಂದ್ರದ ಒಬ್ಬ ಅಧ್ಯಾಪಕರನ್ನು ಉಲ್ಲೇಖಿಸಿ ಕ್ಯಾಂಪ್ಕೊ ಅಧ್ಯಕ್ಷರು ನೀಡಿರುವ ಹೇಳಿಕೆಗೆ ಯೆನೆಪೊಯ ಡೀಮ್ಡ್ ವಿವಿ ಸ್ಪಷ್ಟನೆ ನೀಡಿದೆ.
ಅಡಿಕೆಯಲ್ಲಿ in vitro ಕ್ಯಾನ್ಸರ್ ವಿರೋಧಿ ಶಕ್ತಿಯ ಸಾಧ್ಯತೆಗಳ ಕುರಿತು ನಡೆಸಲಾಗುತ್ತಿರುವ ಅಧ್ಯಯನಕ್ಕೆ ಸಂಬಂಧಿಸಿದಂತೆ ಅಧ್ಯಾಪಕರನ್ನು ವಿಚಾರಣೆ ನಡೆಸಿದಾಗ ಕ್ಯಾಂಪ್ಕೊ ಅಧ್ಯಕ್ಷರೊಂದಿಗೆ ನಡೆದ ಅನೌಪಚಾರಿಕ ಮಾತುಕತೆಯಲ್ಲಿ ಈ ಪ್ರಾಥಮಿಕ ಅಧ್ಯಯನ ವರದಿಯನ್ನು ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ.
ಸಂಶೋಧನೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಅತೀ ಕಡಿಮೆ ಮಾದರಿಗಳ ಮೇಲೆ ನಡೆದಿರುವುದರಿಂದ ಅಡಿಕೆಗೆ ಕ್ಯಾನ್ಸರ್ ವಿರೋಧಿ ಗುಣಗಳಿವೆ ಎಂಬ ತೀರ್ಮಾನಕ್ಕೆ ಬರಲು ಇದು ಸಾಕ್ಷ್ಯಸಮ್ಮತವಾಗುವುದಿಲ್ಲ ಎಂಬುದು ತಿಳಿದುಬಂದಿದೆ.
ಈ ವರದಿಯ ಆಧಾರದಲ್ಲಿ ಕ್ಯಾಂಪ್ಕೊ ಅಧ್ಯಕ್ಷರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಯೆನೆಪೊಯ ಡೀಮ್ಡ್ ವಿವಿ ಒಪ್ಪಿಗೆ ನೀಡಿಲ್ಲ. ಸಂಶೋಧನೆಗೆ ಬಳಸಿರುವ ಮಾದರಿ ಸಂಖ್ಯೆಯು ಅತಿ ಕಡಿಮೆಯದ್ದಾಗಿದೆ. ಹಾಗಾಗಿ ಆ ವರದಿಯ ಮೇಲೆ ಯಾವುದೇ ನಂಬಿಕೆ ಇಲ್ಲ. ಕ್ಯಾಂಪ್ಕೊ ಅಧ್ಯಕ್ಷರು ಈ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡುವ ಮೊದಲು ನಮ್ಮ ಪೂರ್ವಾನುಮತಿ ಪಡೆದಿಲ್ಲ. ಕ್ಯಾಂಪ್ಕೋ ಅಧ್ಯಕ್ಷರ ಹೇಳಿಕೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಯೆನೆಪೊಯ ಡೀಮ್ಡ್ ವಿವಿ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದೆ.







