ಯೆನೆಪೊಯ ವಿವಿಯ ವೈಜ್ಞಾನಿಕ ಸಂಶೋಧನಾ ವರದಿ ಅಡಿಕೆ ಬೆಳೆಗಾರರಿಗೆ ಹೊಸ ಆಶಾಕಿರಣ: ಕ್ಯಾಂಪ್ಕೊ ಶ್ಲಾಘನೆ

ಮಂಗಳೂರು, ನ.4: ಯೆನೆಪೊಯ ವಿಶ್ವವಿದ್ಯಾನಿಲಯವು ಅಡಿಕೆಯ ಮೇಲೆ ಸಂಶೋಧನಾ ಆಧಾರಿತ ಅಧ್ಯಯನ ನಡೆಸಿ ಸಲ್ಲಿಸಿದ ವರದಿಯನ್ನು ಕ್ಯಾಂಪ್ಕೋ ಸ್ವಾಗತಿಸಿದೆ. ಅಲ್ಲದೆ ಈ ಅಧ್ಯಯನದಲ್ಲಿ ಅಡಿಕೆ ಸಾರಗಳು ಶಕ್ತಿಶಾಲಿ ಕ್ಯಾನ್ಸರ್ ಪ್ರತಿಬಂಧಕ ಗುಣಗಳನ್ನು ಹೊಂದಿವೆ ಎಂಬ ಮಹತ್ವದ ನಿರ್ಧಾರಕ್ಕೆ ಬರಲಾಗಿರುವುದನ್ನು ಶ್ಲಾಘಿಸಿದೆ.
ಅಧ್ಯಯನದ ಪ್ರಕಾರ ಅಡಿಕೆಯ ಸಾರಗಳು ಕ್ಯಾನ್ಸರ್ ಕೋಶಗಳ ವೃದ್ಧಿ, ಚಲನೆ ಮತ್ತು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತವೆ. ಇದು ಸಾಮಾನ್ಯ ಕೋಶಗಳಿಗೆ ಹಾನಿಯನ್ನುಂಟು ಮಾಡುವುದಿಲ್ಲ. ಈ ಮಹತ್ವದ ಫಲಿತಾಂಶವು, ಸಂಪ್ರದಾಯಕವಾಗಿ ಸಂಸ್ಕರಿಸಿದ ಅಡಿಕೆಯನ್ನು ಬಳಸಿದರೆ ಆರೋಗ್ಯದಾಯಕ ಲಾಭಗಳಿವೆ ಎಂಬ ಜನಸಾಮಾನ್ಯರ ನಂಬಿಕೆಗೆ ವೈಜ್ಞಾನಿಕ ಸಾಕ್ಷ್ಯಾಧಾರವನ್ನು ಒದಗಿಸಿದಂತಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಅಧ್ಯಯನವು ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗೆ ಅಡಿಕೆಯನ್ನು ಕ್ಯಾನ್ಸರ್‌ಕಾರಕ ಎಂದು ವರ್ಗೀಕರಿಸಿರುವುದು ಕಪೋಲ ಕಲ್ಪಿತ ಎಂಬುದಕ್ಕೆ ಸಾಕ್ಷಿಯಾಗಿದೆ. ಕ್ಯಾಂಪ್ಕೊದ ಪ್ರತಿಪಾದನೆಗೆ ಪ್ರಬಲವಾದ ಪುರಾವೆ ಲಭಿಸಿದಂತಾಗಿದೆ. ಪ್ರತಿಷ್ಠಿತ ಸಂಸ್ಥೆಗಳ ಈ ರೀತಿಯ ಸಂಶೋಧನೆ ಆಧಾರಿತ ನಿರ್ಧಾರಗಳು ಅಡಿಕೆಯ ಕುರಿತು ಸಮತೋಲನದ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಪುಷ್ಟಿಕರಿಸಲು ಸಹಾಯ ಮಾಡುತ್ತವೆ ಎಂದು ತಿಳಿಸಿದ್ದಾರೆ.
ಈ ಹಿಂದೆ ನಿಟ್ಟೆ ವಿಶ್ವವಿದ್ಯಾನಿಲಯ ಮತ್ತಿತರ ಪ್ರತಿಷ್ಠಿತ ವೈಜ್ಞಾನಿಕ ಸಂಸ್ಥೆಗಳ ಅಧ್ಯಯನಗಳು ಕೂಡ ಅಡಿಕೆಯು ಕ್ಯಾನ್ಸರ್‌ಕಾರಕವಲ್ಲ. ಬದಲಾಗಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ ಎಂಬುದನ್ನು ಸಾಬೀತು ಪಡಿಸಿವೆ. ಇದರಿಂದ ಬೆಳೆಗೆ ಇರುವ ಸಾಂಸ್ಕೃತಿಕ ಮತ್ತು ಪರಂಪರಾತ್ಮಕ ಮಹತ್ವ ರುಜುವಾತು ಆಗಿದೆ. ಈ ರೀತಿಯ ವೈಜ್ಞಾನಿಕ ದೃಢೀಕರಣಗಳು ಲಕ್ಷಾಂತರ ಅಡಿಕೆ ಬೆಳೆಗಾರರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಉತ್ಪನ್ನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ ಎಂದು ತಿಳಿಸಿದ್ದಾರೆ.







