ವಿನಯ ಹೆಗ್ಡೆಯಂತಹ ಮತ್ತೊಬ್ಬ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲ: ಡಾ.ಬಿ.ಎ.ವಿವೇಕ ರೈ

ಮಂಗಳೂರು, ಜ. 2: : ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಹಾಕಿದ, ಸರ್ವ ಧರ್ಮವನ್ನು ಪ್ರೀತಿಸುವುದರೊಂದಿಗೆ ಸರ್ವರ ಹೃದಯ ಗೆದ್ದ ನಾಯಕ ವಿನಯ ಹೆಗ್ಡೆಯವರು. ಅವರಿಗೆ ಅವರೇ ಸಾಟಿ. ಕರಾವಳಿ ವಿನಯ ಹೆಗ್ಡೆಯವರಂತಹ ಮತ್ತೊಬ್ಬ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲ ಎಂದು ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಬಿ.ಎ.ವಿವೇಕ ರೈ ಹೇಳಿದ್ದಾರೆ.
ಗುರುವಾರ ನಿಧನರಾದ ವಿನಯ ಹಗ್ಡೆಯವರಿಗೆ ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದ ಅವರು, ವಿನಯ ಹೆಗ್ಡೆ ಇಡೀ ಕರಾವಳಿಯ ನೇತೃತ್ವದ ಶಕ್ತಿಯಾಗಿದ್ದರು. ಅಂತಹ ಮಹಾನ್ ಶಕ್ತಿಯೊಂದು ನಮ್ಮಿಂದ ದೂರವಾಗಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು. ಅವರ ಆದರ್ಶಗಳನ್ನು ಪಾಲಿಸಿ ಮುನ್ನಡೆಯುವುದೇ ನಾವು ಅವರಿಗೆ ಕೊಡುವ ನಿಜವಾದ ಗೌರವ ಎಂದರು.
ನಿಟ್ಟೆಯಂತಹ ಸಣ್ಣ ಹಳ್ಳಿಯಲ್ಲಿ ಕನ್ನಡ ಶಾಲೆಯೊಂದನ್ನು ಆರಂಭಿಸಿ ಹಂತ ಹಂತವಾಗಿ ಶಿಕ್ಷಣ ಸಂಸ್ಥೆಯನ್ನು ವಿಸ್ತರಿಸಿದವರು. ನಿಟ್ಟೆ ಈಗ ನಂದನವನವಾಗಿ ಬೆಳಗುತ್ತಿದೆ. ಇದರ ಜೊತೆಗೆ ಕೈಗಾರಿಕೆಯನ್ನು ಆರಂಭಿಸಿ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದರು. ಶೈಕ್ಷಣಿಕ ಸಾಧನೆಯೊಂದಿಗೆ ಔದ್ಯೋಗಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ ಮಾಡಿರುವ ವಿನಯ ಹೆಗ್ಡೆ, ಶಿಸ್ತು ಸಂಯಮದೊಂದಿಗೆ ಮಾದರಿಯಾಗಿ ಬದುಕಿದವರು. ಅವರು ಇನ್ನಿಲ್ಲ ಎನ್ನಲು ಮನಸ್ಸು ಒಪ್ಪುತ್ತಿಲ್ಲ ಎಂದು ವಿವೇಕ ರೈ ನುಡಿದರು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ, ವಿನಯ ಹೆಗ್ಡೆಯವರು ತಮ್ಮ ಹೆಸರಿಗೆ ತಕ್ಕಂತೆ ನಯ ವಿನಯತೆಯನ್ನು ಮೈಗೂಡಿಸಿಕೊಂಡು ಆದರ್ಶಪ್ರಾಯರಾಗಿ ಬದುಕಿದವರು. ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಮಹತ್ತರವಾದುದು ಎಂದರು.
ಕಣಚೂರು ಸಂಸ್ಥೆಯ ಅಧ್ಯಕ್ಷ ಕಣಚೂರು ಮೋನು ಮಾತನಾಡಿ, ಇಂದು ಕಣಚೂರು ವೈದ್ಯಕೀಯ ಕಾಲೇಜು ಬೆಳೆದು ನಿಂತಿದ್ದರೆ ಅದರ ಹಿಂದೆ ವಿನಯ ಹೆಗ್ಡೆಯವರ ಕೊಡುಗೆಯೂ ಇದೆ. ಎಲ್ಲಾ ರೀತಿಯ ಸಹಕಾರವನ್ನು ನೀಡಿರುವುದನ್ನು ಮರೆಯುವಂತಿಲ್ಲ ಎಂದರು.
ಸಮಾಜಕ್ಕೆ ಸರ್ವಸ್ವವನ್ನೇ ಧಾರೆಎರೆದ ಅಮೂಲ್ಯ ರತ್ನವೊಂದನ್ನು ನಾವಿಂದು ಕಳೆದುಕೊಂಡಿದ್ದೇವೆ. ವಿನಯ ಹೆಗ್ಡೆಯವರು ಹೃದಯ ಶ್ರೀಮಂತಿಕೆಯುಳ್ಳ ವ್ಯಕ್ತಿಯಾಗಿದ್ದರು. ನಿಟ್ಟೆಯನ್ನು ಜಗತ್ತಿನ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಅವರ ಸಾಧನೆ ಸಾಮಾನ್ಯವಾದುದಲ್ಲ ಎಂದು ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಹೇಳಿದರು.
ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಮಾತನಾಡಿ, ಜನತೆಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ನೀಡಿರುವ ವಿನಯ ಹೆಗ್ಡೆಯವರು ಸದಾ ಸಮಾಜದ ಬಗ್ಗೆ ಕಳಕಳಿ ಹೊಂದಿದ್ದವರು. ಸಂಸ್ಥೆಯಿಂದ ಬಂದ ಎಂದೂ ಸ್ವಂತಕ್ಕೆ ಬಳಸಿಲ್ಲ. ಎಲ್ಲವನ್ನೂ ಸಮಾಜದ ಅಭಿವೃದ್ಧಿಗೆ ಮೀಸಲಿಡುತ್ತಿದ್ದರು. ಅವರೋರ್ವ ಆದರ್ಶ ವ್ಯಕ್ತಿ ಎಂದು ಬಣ್ಣಿಸಿದರು.
ಶಾಸಕ ಡಿ.ವೇದವ್ಯಾಸ ಕಾಮತ್, ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ಎಜೆ ವೈದ್ಯಕೀಯ ಸಂಸ್ಥೆಯ ಅಧೀಕ್ಷಕ ಡಾ.ಪ್ರಶಾಂತ ಮಾರ್ಲ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ಎಂ.ಆರ್.ವಾಸುದೇವ, ಜಗದೀಶ ಶೇಣವ ಮುಂತಾದವರು ನುಡಿನಮನ ಸಲ್ಲಿಸಿದರು.
ಹಿರಿಯ ಪತ್ರಕರ್ತ ಪಿ.ಎಸ್.ಪ್ರಕಾಶ್, ವಿಧಾನ ಪರಾಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ರಾಘವೇಂದ್ರ ಎಸ್ ಭಟ್, ಬ್ಯಾಂಕಿನ ನಿವೃತ್ತ ಅಧಿಕಾರಿ ಮಹಬಲೇಶ್ವರ ಎಂ.ಎಸ್. ಮಾಜಿ ಮೇಯರ್ ಶಶಿಧರ ಹೆಗ್ಡೆ ಮತ್ತಿತರರು ಪುಷ್ಪನಮನ ಸಲ್ಲಿಸಿದರು.







