ಝಕರಿಯಾ ಜೋಕಟ್ಟೆ ಅವರಿಗೆ ಮೀಫ್‌ನಿಂದ ಸನ್ಮಾನ

ಮಂಗಳೂರು: ಮುಸ್ಲಿಮ್ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ ದ. ಕ., ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳ 262 ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಪರವಾಗಿ ಕನ್ನಡ ರಾಜ್ಯೋತ್ಸವ ರಾಜ್ಯ ಪುರಸ್ಕೃತ ಅನಿವಾಸಿ ಉದ್ಯಮಿ ಝಕರಿಯಾ ಜೋಕಟ್ಟೆ ಅವರನ್ನು ಮಂಗಳೂರಿನ ಬರಕಾ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ವಹಿಸಿ, ಈ ಸಂಸ್ಥೆಯು ಅರ್ಹ ವಿದ್ಯಾರ್ಥಿಗಳಿಗೆ ಈ ತನಕ 485 ಮೀಫ್ ಉಚಿತ ಸೀಟುಗಳನ್ನು ನೀಡಿರುವುದರ ಜೊತೆಗೆ ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ಗುಣ ಮಟ್ಟವನ್ನು ಹೆಚ್ಚಿಸಲು ಪ್ರತೀ ವರ್ಷ ನೂರಕ್ಕೂ ಹೆಚ್ಚು ವಿವಿಧ ಕಾರ್ಯಕ್ರಮಗಳನ್ನು ನಡೆಸಿತ್ತಿರುವ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ನೀಡಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಮೀಫ್ ಕೈಗೊಂಡ ವಿವಿದ ಕಾರ್ಯಕ್ರಮಗಳನ್ನು ಶ್ಲಾಘಿಸಿ, ಮೀಫ್ ಬಡ ವಿದ್ಯಾರ್ಥಿಗಳ ಉನ್ನತಿಗಾಗಿ ಇನ್ನಷ್ಟು ಹೆಚ್ಚಿನ ಕಾರ್ಯಕ್ರಮ ಅಳವಡಿಸಬೇಕೆಂದೂ, ಅದಕ್ಕೆ ತಾನೂ ನಿಮ್ಮ ಜೊತೆ ಕೈಜೋಡಿಸುವುದಾಗಿಯೂ ಝಕ್ರಿಯಾ ಭರವಸೆ ನೀಡಿದರು.
ಮುಖ್ಯ ಅತಿಥಿ ಗಳಾಗಿ ಮಂಗಳೂರಿನ ಸುಲ್ತಾನ್ ಗೋಲ್ಡ್ ಆಡಳಿತ ನಿರ್ದೇಶಕರಾದ ರವೂಫ್ ಮತ್ತು ಬರಕಾ ಸಂಸ್ಥೆಯ ಆಡಳಿತ ನಿರ್ದೇಶಕಿ ನರ್ಗಿಸ್ ಆಶ್ರಫ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ಮೀಫ್ ಉಪಾಧ್ಯಕ್ಷ ಪರ್ವೀಜ್ ಅಲಿ, ಉಡುಪಿ ಘಟಕದ ಗೌರವಾಧ್ಯಕ್ಷ ಶಬೀ ಅಹಮದ್ ಖಾಝಿ, ಕಾರ್ಯದರ್ಶಿ ಗಳಾದ ಅನ್ವರ್ ಗೂಡಿನ ಬಳಿ, ಕೋಶಾಧಿಕಾರಿ ನಿಸಾರ್ ಎಂ. ಫಕೀರ್, ಸದಸ್ಯರುಗಳಾದ ಪಿ. ಎ. ಇಲ್ಯಾಸ್ ಕಾಟಿಪಳ್ಳ, ಅಬ್ದುಲ್ ರಝಕ್ ಗೋಳ್ತಮಜಲು, ಹನೀಫ್ ಚೈತನ್ಯ, ಅಬ್ದುಲ್ ಅಝೀಝ ಅಂಬರ್ ವ್ಯಾಲಿ, ಆದಿಲ್ ಕುನಿಲ್, ಫಾರೂಕ್ ಏರ್ ಲೈನ್ಸ್, ಬಷೀರ್ ಕುಂಬ್ರ, ಬರಕ ವಿದ್ಯಾ ಸಂಸ್ಥೆಯ ಅಯಾನ್ ಆಶ್ರಫ್, ಸೌಶ್ರೀನ್ ಮತ್ತು ಸಮೀರ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹ್ಮದ್ ಸ್ವಾಗತಿಸಿ, ಕಾರ್ಯದರ್ಶಿ ಶಹಮ್ ಅಲ್ ಫುರ್ಖಾನ್ ವಂದಿಸಿದರು.
ಕಾರ್ಯದರ್ಶಿ ಮುಹಮ್ಮದ್ ಶಾರಿಕ್ ಕಾರ್ಯಕ್ರಮ ನಿರೂಪಿಸಿದರು.







