ಉತ್ತರ ಪ್ರದೇಶ | ವಿಶೇಷಚೇತನ ಯುವತಿಯ ಸಾಮೂಹಿಕ ಅತ್ಯಾಚಾರ; ಆರೋಪಿಗಳ ಬಂಧನ

Photo credit: NDTV
ಲಕ್ನೋ : ಉತ್ತರ ಪ್ರದೇಶದ ಬಲರಾಂಪುರದಲ್ಲಿ 21ರ ಹರೆಯದ ವಿಶೇಷಚೇತನ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ನಿರ್ಜನ ರಸ್ತೆಯಲ್ಲಿ ಆಕೆಯನ್ನು ಬೆನ್ನಟ್ಟುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
“ಸೋಮವಾರ ಯುವತಿ ತನ್ನ ಮಾವನ ಮನೆಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ತನ್ನ ಮನೆಗೆ ಕಾಲ್ನಡಿಗೆಯಲ್ಲಿ ಹಿಂತಿರುಗುತ್ತಿದ್ದಾಗ, ಅಪರಿಚಿತ ವ್ಯಕ್ತಿ ಆಕೆಯನ್ನು ಬಲವಂತವಾಗಿ ಬೈಕ್ನಲ್ಲಿ ಕೂರಿಸಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದ್ದಾನೆ” ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ವಿಶಾಲ್ ಪಾಂಡೆ ತಿಳಿಸಿದ್ದಾರೆ.
ಆದರೆ, ಆಕೆಯ ಕುಟುಂಬ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಫೈರಿಂಗ್ ನಡೆಸಿ ಅಂಕುರ್ ವರ್ಮಾ ಮತ್ತು ಹರ್ಷಿತ್ ಪಾಂಡೆ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪ್ರಸ್ತುತ ಚಿಕಿತ್ಸೆ ನೀಡಲಾಗುತ್ತಿದೆ.
ಮಾವನ ಮನೆಗೆ ತೆರಳಿದ್ದ ಯುವತಿ ಮನೆಗೆ ಹಿಂತಿರುಗದಿದ್ದಾಗ ಆಕೆಯ ಕುಟುಂಬದ ಸದಸ್ಯರು ಆಕೆಗೆ ಹುಡುಕಾಟ ನಡೆಸಿದ್ದರು. ಈ ವೇಳೆ ಆಕೆ ಪೊಲೀಸ್ ಠಾಣೆ ಬಳಿಯ ಪೊದೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿರುವುದು ಕಂಡು ಬಂದಿತ್ತು. ಆಕೆಗೆ ಪ್ರಜ್ಞೆ ಬಂದಾಗ, ನನ್ನ ಮೇಲೆ ಬೈಕ್ನಲ್ಲಿ ಬಂದ ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೋಷಕರಿಗೆ ತಿಳಿಸಿದ್ದಾಳೆ.







