ಝುಬೀನ್ ಗರ್ಗ್ ಮೃತ್ಯು ಪ್ರಕರಣ | ತನಿಖೆಯಲ್ಲಿ ಉದ್ದೇಶಪೂರ್ವಕ ವಿಳಂಬ; ಗೌರವ್ ಗೊಗೊಯಿ ಆರೋಪ

PC | PTI
ಗುವಾಹಟಿ: ಗಾಯಕ ಝುಬೀನ್ ಗರ್ಗ್ ಮೃತ್ಯು ಪ್ರಕರಣದ ತನಿಖೆಯಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಸೋಮವಾರ ಆರೋಪಿಸಿದ ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೌರವ್ ಗೊಗೊಯಿ, ಈ ವಿಷಯದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮರ ಪಾತ್ರ ತೀವ್ರ ಶಂಕಾಸ್ಪದವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೌರವ್ ಗೊಗೊಯಿ, “ತನಿಖೆಯನ್ನು ವಿವಿಧ ದಿಕ್ಕಿಗೆ ತಿರುಗಿಸುವ ಪ್ರಯತ್ನ ನಡೆಸುತ್ತಿರುವಂತೆ ಕಂಡು ಬರುತ್ತಿದ್ದು, ಆರೋಪಿಗಳು ಬಿಜೆಪಿಗೆ ನಿಕಟವಾಗಿರುವುದರಿಂದ, ಸಾಕ್ಷ್ಯಾಧಾರಗಳನ್ನು ಅಳಿಸಿ ಹಾಕಲು ಅವಕಾಶ ನೀಡಲಾಗಿದೆ” ಎಂದು ಆರೋಪಿಸಿದರು.
“ಗಾಯಕ ಝುಬೀನ್ ಗರ್ಗ್ ರಿಗೆ ನ್ಯಾಯ ದೊರಕಿಸುವುದನ್ನು ಮುಖ್ಯಮಂತ್ರಿ ಖಾತರಿಗೊಳಿಸಲಿದ್ದಾರೆ ಎಂಬ ಭಾರಿ ನಿರೀಕ್ಷೆಯಲ್ಲಿ ಜನರಿದ್ದರು. ಆದರೆ, ಅವರ ಇತ್ತೀಚಿನ ಹೇಳಿಕೆಗಳ ಪ್ರಕಾರ, ಅವರು ವಾಸ್ತವಗಳನ್ನು ಬಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಹಾಗೂ ಮುಖ್ಯ ಆರೋಪಿಗಳನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂಬಂತೆ ಕಂಡು ಬರುತ್ತಿದೆ” ಎಂದೂ ಅವರು ಆಪಾದಿಸಿದರು.
ಈಶಾನ್ಯ ಭಾರತ ಹಬ್ಬವನ್ನು ಆಯೋಜಿಸಿದ್ದ ಮುಖ್ಯ ಆರೋಪಿಗಳಾದ ಸಂಘಟಕ ಶ್ಯಾಮ್ ಕಾನು ಮಹಂತ ಹಾಗೂ ಝುಬೀನ್ ಗರ್ಗ್ ರ ವ್ಯವಸ್ಥಾಪಕ ಸಿದ್ಧಾರ್ಥ್ ಶರ್ಮರನ್ನುದ್ದೇಶಿಸಿ ಅವರು ಈ ಆರೋಪ ಮಾಡಿದರು.
“ಒಂದು ವೇಳೆ ಮುಖ್ಯ ಮಂತ್ರಿ ವಾಸ್ತವಾಂಶಗಳನ್ನು ಮುಂದಿಡುತ್ತಿಲ್ಲ ಅಥವಾ ಅವರು ಅಸಮರ್ಥ ಹಾಗೂ ಅದಕ್ಷರಾಗಿದ್ದಾರೆ” ಎಂದು ಅವರು ವಾಗ್ದಾಳಿ ನಡೆಸಿದರು.
“ಗಾಯಕ ಝುಬೀನ್ ಗರ್ಗ್ ಮೃತಪಟ್ಟು ಹತ್ತು ದಿನಗಳು ಕಳೆದಿದ್ದರೂ ಸಿದ್ಧಾರ್ಥ ಶರ್ಮ ಹಾಗೂ ಶ್ಯಾಮ್ ಕಾನು ಮಹಂತ ಎಲ್ಲಿದ್ದಾರೆ ಎಂದು ಇದುವರೆಗೂ ಯಾರಿಗೂ ತಿಳಿದಿಲ್ಲ” ಎಂದು ಅವರು ಟೀಕಿಸಿದರು.
ಇದಕ್ಕೂ ಮುನ್ನ, ಇಬ್ಬರು ಆರೋಪಿಗಳಿಗೆ ಇಂಟರ್ ಪೋಲ್ ನಿಂದ ಲುಕೌಟ್ ನೋಟಿಸ್ ಜಾರಿಗೊಳಿಸಲಾಗಿದ್ದು, ಅಕ್ಟೋಬರ್ 6ರೊಳಗೆ ಗುವಾಹಟಿಗೆ ಆಗಮಿಸಿ ಹೇಳಿಕೆಗಳನ್ನು ದಾಖಲಿಸಬೇಕು. ಇಲ್ಲವಾದರೆ, ಪೊಲೀಸರು ಅವರಿಗಾಗಿ ತಮ್ಮ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಿದ್ದಾರೆ ಎಂದು ಎಚ್ಚರಿಸಲಾಗಿದೆ ಎಂದು ಸೆಪ್ಟೆಂಬರ್ 27ರಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ತಿಳಿಸಿದ್ದರು.
ಸಿಂಗಾಪುರದಲ್ಲಿ ಗಾಯನ ಕಾರ್ಯಕ್ರಮ ನೀಡಲು ತೆರಳಿದ್ದ ಝುಬೀನ್ ಗರ್ಗ್, ಸೆಪ್ಟೆಂಬರ್ 19ರಂದು ಮೃತಪಟ್ಟಿದ್ದರು.







