ಒಬಿಸಿ ಮೀಸಲಾತಿ ಕುರಿತು ನಿಮ್ಮ ಪಕ್ಷದ ಸ್ಪಷ್ಟ ನಿಲುವು ತಿಳಿಸಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದ ಕರ್ನಾಟಕ ಕಾಂಗ್ರೆಸ್

ರಮೇಶ್ ಬಾಬು|ಜೆ.ಪಿ.ನಡ್ಡಾ
ಬೆಂಗಳೂರು : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ಕರ್ನಾಟಕ ಸರಕಾರದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸಿರುವುದರಿಂದ ಒಬಿಸಿ ಮೀಸಲಾತಿ ಕುರಿತು ಬಿಜೆಪಿಯ ಸ್ಪಷ್ಟ ನಿಲುವನ್ನು ಕೋರಿ ಕರ್ನಾಟಕ ಕಾಂಗ್ರೆಸ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದೆ.
ಈ ಕುರಿತು ಕರ್ನಾಟಕ ಕಾಂಗ್ರೆಸ್ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಅವರು ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದು, ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯ, ಸಮಾನ ಪ್ರಾತಿನಿಧ್ಯ ಮತ್ತು ಹಿತಾಸಕ್ತಿಗಳ ರಕ್ಷಣೆಗೆ ಸಾಂವಿಧಾನಿಕ ನಿಬಂಧನೆಗಳು ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ಅನುಗುಣವಾಗಿ ಸಮೀಕ್ಷೆಯನ್ನು ರಾಜ್ಯದಲ್ಲಿ ನಡೆಸಲಾಗುತ್ತಿದೆ. ಸಮೀಕ್ಷೆಯಲ್ಲಿ ಬಂದ ಮಾಹಿತಿ ಅನುಸರಿಸಿ ಕಲ್ಯಾಣ ನೀತಿಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಆದರೆ, ಜೋಶಿ ಮತ್ತು ತೇಜಸ್ವಿ ಸೂರ್ಯ ಅವರ ಹೇಳಿಕೆಗಳು ಸಾಂವಿಧಾನಿಕ ಪ್ರಕ್ರಿಯೆಯನ್ನು ವಿರೋಧಿಸುವುದಲ್ಲದೆ, ಹಿಂದುಳಿದ ವರ್ಗಗಳು ಮತ್ತು ಮೀಸಲಾತಿಯ ವಿರುದ್ಧದ ಪಿತೂರಿ ಎಂದು ಬಿಂಬಿಸುತ್ತವೆ ಎಂದು ಹೇಳಿದ್ದಾರೆ.
ಇವರ ಹೇಳಿಕೆಯು ಸಮೀಕ್ಷೆಯ ಉದ್ದೇಶ ಮತ್ತು ಫಲಿತಾಂಶದ ಬಗ್ಗೆ ಒಬಿಸಿ ಸಮುದಾಯಗಳಲ್ಲಿ ಗೊಂದಲ ಮತ್ತು ವಿಭಜನೆಯನ್ನು ಸೃಷ್ಟಿಸುತ್ತದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಸಾಂವಿಧಾನಿಕ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ. ಈ ಹೇಳಿಕೆಗಳು ಮೀಸಲಾತಿಯನ್ನು ಕಾಪಾಡಿ ಹಿಂದುಳಿದ ವರ್ಗಗಳಿಗೆ ನ್ಯಾಯ ನೀಡುವ ಬಗ್ಗೆ ಬಿಜೆಪಿ ನೀಡಿರುವ ಭರವಸೆಗೆ ವಿರುದ್ಧವಾಗಿದೆ. ಇವು ಬಿಜೆಪಿ ಮೇಲೆ ಒಬಿಸಿ ಸಮುದಾಯದ ನಂಬಿಕೆಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದರು.
ಕಾನೂನುಬದ್ಧವಾಗಿ ಹಿಂದುಳಿದ ವರ್ಗಗಳ ಹಕ್ಕುಗಳನ್ನು ರಕ್ಷಿಸಲು ಉದ್ದೇಶಿಸಿ ನಡೆಸುತ್ತಿರುವ ಸಮೀಕ್ಷೆಯನ್ನು ಬಿಜೆಪಿಯ ಹಿರಿಯ ನಾಯಕರು ಮತ್ತು ಚುನಾಯಿತ ಪ್ರತಿನಿಧಿಗಳು ವಿರೋಧಿಸುವುದು ಸರಿಯಲ್ಲ. ಅವರ ಹೇಳಿಕೆಗಳು ಒಬಿಸಿ ಸಮುದಾಯಗಳ ಬಗ್ಗೆ ಬಿಜೆಪಿಯ ಬದ್ಧತೆಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕುತ್ತವೆ. ಈ ಪ್ರಕ್ರಿಯೆಯನ್ನು ವಿರೋಧಿಸುವ ಮೂಲಕ ಜೋಶಿ ಮತ್ತು ತೇಜಸ್ವಿ ಸೂರ್ಯ ಒಬಿಸಿ ಹಕ್ಕುಗಳನ್ನು ಮತ್ತು ಮೀಸಲಾತಿಯ ಉದ್ದೇಶವನ್ನು ದುರ್ಬಲಗೊಳಿಸುತ್ತಾರೆ. ಅವರು ಹಿಂದುಳಿದ ವರ್ಗದ ಜನರಲ್ಲಿ ವಿಭಜನೆ ಮತ್ತು ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಒಬಿಸಿ ವಿರೋಧಿ ನಿಲುವನ್ನು ಹೊಂದಿರುವ ಪ್ರಹ್ಲಾದ್ ಜೋಶಿ ಮತ್ತು ತೇಜಸ್ವಿ ಸೂರ್ಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕರ್ನಾಟಕ ಒಬಿಸಿ ಸಮೀಕ್ಷೆಯ ಕುರಿತು ಪಕ್ಷವು ತನ್ನ ಅಧಿಕೃತ ನಿಲುವನ್ನು ತಕ್ಷಣವೇ ಸ್ಪಷ್ಟಪಡಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.







