ಕರ್ನೂಲ್ ಬಸ್ ದುರಂತದಲ್ಲಿ ಮೂರನೇ ವಾಹನದ ಪಾತ್ರ ಶಂಕೆ!

Photo credit: PTI
ಕರ್ನೂಲ್: 20 ಜನರು ಪ್ರಾಣ ಕಳೆದುಕೊಂಡ ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ ಮೂರನೇ ವಾಹನದ ಪಾತ್ರವಿರಬಹು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಆಂಧ್ರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 24ರ ಮುಂಜಾನೆ ಚಿನ್ನ ಟೆಕೂರು ಗ್ರಾಮದ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಸ್ಲೀಪರ್ ಬಸ್ ಈಗಾಗಲೇ ಅಪಘಾತಕ್ಕೀಡಾದ ಬೈಕ್ ಗೆ ಡಿಕ್ಕಿ ಹೊಡೆದಿತ್ತು. ಢಿಕ್ಕಿಯ ತೀವ್ರತೆಯಿಂದ ಬೈಕ್ ಬಸ್ ನ ಕೆಳಗೆ ಸಿಲುಕಿಕೊಂಡು ಎಳೆದುಕೊಂಡು ಹೋಗಿದೆ. ಈ ವೇಳೆ ಇಂಧನ ಟ್ಯಾಂಕ್ ಮುಚ್ಚಳ ತೆರೆದು ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲೇ ಬಸ್ ಸಂಪೂರ್ಣವಾಗಿ ಆವರಿಸಿಕೊಂಡಿತು ಎಂದು ವರದಿಯಾಗಿದೆ.
ಬಸ್ನಲ್ಲಿ ಇದ್ದ 44 ಪ್ರಯಾಣಿಕರಲ್ಲಿ ಹಲವರನ್ನು ರಕ್ಷಿಸಲಾಯಿತಾದರೂ, 20 ಮಂದಿ ಬೆಂಕಿಗಾಹುತಿಯಾದರು.
ಘಟನಾ ಸ್ಥಳದಲ್ಲಿ ಕಂಡುಬಂದ ಸ್ಕಿಡ್ ಗುರುತುಗಳ ಆಧಾರದ ಮೇಲೆ ಮೂರನೇ ವಾಹನವು ಅಪಘಾತದಲ್ಲಿ ಭಾಗಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಕರ್ನೂಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ಪಾಟೀಲ್ ತಿಳಿಸಿದ್ದಾರೆ.
“ಬೈಕ್ನ ಸ್ಕಿಡ್ ಮಾರ್ಕ್ನ ಸ್ಥಾನ ಮತ್ತು ದಿಕ್ಕಿನ ವ್ಯತ್ಯಾಸವು ಬಸ್ ಢಿಕ್ಕಿ ಹೊಡೆಯುವ ಮೊದಲು ಇನ್ನೊಂದು ವಾಹನ ಬೈಕ್ಗೆ ಢಿಕ್ಕಿ ಹೊಡೆದಿರಬಹುದೆಂಬ ಸೂಚನೆ ನೀಡುತ್ತಿದೆ,” ಎಂದು ಪಾಟೀಲ್ ಪಿಟಿಐಗೆ ಹೇಳಿದರು.
ಪೊಲೀಸರು ಇದೀಗ ಮೂರನೇ ವಾಹನವನ್ನು ಪತ್ತೆಹಚ್ಚಲು ಮತ್ತು ಈ ದುರಂತಕ್ಕೆ ಕಾರಣವಾದ ಘಟನೆಗಳ ಕ್ರಮವನ್ನು ಸ್ಪಷ್ಟಗೊಳಿಸಲು ತನಿಖೆ ಮುಂದುವರೆಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಬಸ್ನಲ್ಲಿದ್ದ ಸ್ಮಾರ್ಟ್ಫೋನ್ಗಳು ಹಾಗೂ ವಾಹನ ಬ್ಯಾಟರಿಗಳು ಬೆಂಕಿಯ ತೀವ್ರತೆಯನ್ನು ಹೆಚ್ಚಿಸಲು ಕಾರಣವಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.







