ʼಸಂಚಾರ್ ಸಾಥಿʼ ಅಪ್ಲಿಕೇಶನ್ ಕಡ್ಡಾಯ; ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ

Photo credit: sancharsaathi.gov.in
ಹೊಸದಿಲ್ಲಿ: ಆನ್ಲೈನ್ ವಂಚನೆಗೆ ತಡೆಯೊಡ್ಡುವ ಉದ್ದೇಶದಿಂದ ದೇಶಾದ್ಯಂತ ಎಲ್ಲ ಮೊಬೈಲ್ಗಳಿಗೂ ʼಸಂಚಾರ್ ಸಾಥಿʼ ಆ್ಯಪ್ ಇನ್ಬಿಲ್ಟ್ ಆಗಿ ಡಿಲೀಟ್ ಆಗದಂತೆ ದೊರೆಯಲು ಸಾಫ್ಟ್ವೇರ್ ಅಭಿವೃದ್ಧಿ ಮಾಡಲು ಸೂಚಿಸಲಾಗಿತ್ತು. ಇದೀಗ ವಿವಾದದ ಬಳಿಕ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಆ್ಯಪ್ ಕಡ್ಡಾಯವಲ್ಲ ಎಂದು ಹೇಳಿದೆ. ಆದರೆ ಪ್ರಕಟಿಸಿದ ನಿರ್ಧಾರವನ್ನು ಹಿಂತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ.
ಆನ್ಲೈನ್ ವಂಚನೆಗೆ ತಡೆಯೊಡ್ಡಲು ಸರ್ಕಾರದ ಸಂಚಾರ ಸಾಥಿ ಆ್ಯಪ್ ಅನ್ನು ಎಲ್ಲಾ ಮೊಬೈಲ್ ಗಳಲ್ಲಿ ಇನ್ಸ್ಟಾಲ್ ಮಾಡುವಂತೆ ಕೇಂದ್ರ ಸರ್ಕಾರ ಫೋನ್ ತಯಾರಕರಿಗೆ ಸೂಚಿಸಿದೆ. ದೇಶಾದ್ಯಂತ ಎಲ್ಲ ಮೊಬೈಲ್ ಗಳಿಗೂ ಇದು ಅನ್ವಯಿಸಲಿದ್ದು, ಡಿಲೀಟ್ ಆಗದಂತೆ ಸಾಫ್ಟ್ವೇರ್ ಅಭಿವೃದ್ಧಿ ಮಾಡಲು ಸೂಚಿಸಲಾಗಿತ್ತು. ಇದೀಗ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟನೆ ನೀಡಿದ್ದು, “ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಸಕ್ರಿಯಗೊಳಿಸುವುದು ಬಳಕೆದಾರರಿಗೆ ಬಿಟ್ಟದ್ದು” ಎಂದು ಹೇಳಿದ್ದಾರೆ.
“ದೂರಸಂಪರ್ಕ ಇಲಾಖೆ ಅಭಿವೃದ್ಧಿಪಡಿಸಿದ ಸೈಬರ್ ಭದ್ರತಾ ಆ್ಯಪ್ ಸಂಚಾರ್ ಸಾಥಿಯಿಂದ ಯಾವುದೇ ಬೇಹುಗಾರಿಕೆ ಅಥವಾ ಕರೆ ಮೇಲ್ವಿಚಾರಣೆ ಒಳಗೊಂಡಿರುವುದಿಲ್ಲ, ಗೌಪ್ಯತೆಯ ಬಗ್ಗೆ ಕಾಳಜಿ ಮತ್ತು ಸರ್ಕಾರದ ಕಣ್ಗಾವಲಿನ ಭಯವಿದ್ದವರು ಅದನ್ನು ಡಿಲೀಟ್ ಮಾಡಬಹುದು” ಎಂದು ಸಚಿವರು ಹೇಳಿದ್ದಾರೆ.
ಏನಿದು ಸಂಚಾರ್ ಸಾಥಿ?
ಮೇ 2023ರಂದು ಸ್ಥಾಪಿಸಲಾದ ಈ ಪೋರ್ಟಲ್ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ ಆಗಿಯೂ ಲಭ್ಯವಿದೆ. ದೂರಸಂಪರ್ಕ ಇಲಾಖೆ ಮೊಬೈಲ್ ಬಳಕೆದಾರರ ಭದ್ರತೆ ಮತ್ತು ಜಾಗೃತಿಯನ್ನು ಹೆಚ್ಚಿಸಲು ಈ ಅಪ್ಲಿಕೇಶನ್ ಅನ್ನು ತಯಾರಿಸಿದೆ ಎಂದು ಹೇಳಿಕೊಂಡಿದೆ.
ಇದೀಗ ಇದರ ಬಳಕೆ ಜನರ ಆಯ್ಕೆಗೆ ಬಿಟ್ಟಿದೆ. ದುರುದ್ದೇಶಪೂರಿತ ವೆಬ್ ಲಿಂಕ್ ಗಳ ಬಗ್ಗೆ ಮತ್ತು ಕಳೆದು ಹೋದ ಮೊಬೈಲ್ ಫೋನ್ ಗಳನ್ನು ನಿರ್ಬಂಧಿಸುವುದು ಮತ್ತು ವರದಿ ಮಾಡಬಹುದಾಗಿದೆ. ಆದರೆ ಶೀಘ್ರವೇ ಈ ಅಪ್ಲಿಕೇಶನ್ ಪ್ರತಿ ಫೋನ್ ನಲ್ಲಿ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಅಪ್ಲಿಕೇಶನ್ ಕುರಿತ ಕಾಳಜಿ ಏನು?
ಎಲ್ಲಾ ಸ್ಮಾರ್ಟ್ಫೋನ್ ತಯಾರಕರಿಗೆ ದೂರಸಂಪರ್ಕ ಇಲಾಖೆ ಹೊಸ ಮೊಬೈಲ್ ಸಾಧನಗಳಲ್ಲಿ ಸಂಚಾರ್ ಸಾಥಿಯನ್ನು ಮೊದಲೇ ಸ್ಥಾಪಿಸುವಂತೆ ಸೂಚಿಸಿದೆ. “ಅಪ್ಲಿಕೇಶನ್ ಸುಲಭವಾಗಿ ಗೋಚರಿಸಬೇಕು ಮತ್ತು ಬಳಕೆದಾರರು ಸುಲಭವಾಗಿ ಪ್ರವೇಶಿಸುವಂತೆ ಇರಬೇಕು. ಅದರ ಕಾರ್ಯಗಳನ್ನು ನಿಷ್ಕ್ರಿಯಗೊಳಿಸಲಾಗಿಲ್ಲ ಅಥವಾ ನಿರ್ಬಂಧಿಸಲಾಗಿಲ್ಲ ಎಂದು ಖಚಿತಪಡಿಸಬೇಕು. ಈಗಾಗಲೇ ಬಳಸುತ್ತಿರುವ ಸಾಧನಗಳು ಸಾಫ್ಟ್ವೇರ್ ನವೀಕರಣದ ಮೂಲಕ ಅಪ್ಲಿಕೇಶನ್ ಅನ್ನು ಸ್ವೀಕರಿಸುವಂತಿರಬೇಕು” ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಇದರಿಂದಾಗಿ ಸ್ಮಾರ್ಟ್ಫೋನ್ ಬಳಕೆದಾರರು ಕದ್ದಾಲಿಕೆಯ ಆತಂಕ ವ್ಯಕ್ತಪಡಿಸಿದ್ದರು. ಸ್ಮಾರ್ಟ್ಫೋನ್ ತಯಾರಕರ ಜೊತೆಗೂ ಘರ್ಷಣೆ ಕಾರಣವಾಗಿದೆ.
ಇದೀಗ ಈ ವಿಚಾರ ದತ್ತಾಂಶ ಸಂಗ್ರಹಣೆ ಮತ್ತು ಬಳಕೆದಾರರ ಒಪ್ಪಿಗೆ ಇಲ್ಲದಿರುವ ಬಗ್ಗೆ ರಾಜಕೀಯ ವಿವಾದವನ್ನು ಸೃಷ್ಟಿಸಿದೆ. ಈ ವಿಷಯ ಸಂಸತ್ತಿನಲ್ಲೂ ಪ್ರತಿಧ್ವನಿಸಿದೆ. ಮತ್ತು ಕಾಂಗ್ರೆಸ್ ಈ ನಿರ್ದೇಶನವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದೆ. ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಇದನ್ನು ‘ಸ್ನೂಪಿಂಗ್ ಅಪ್ಲಿಕೇಶನ್” ಎಂದು ಜರೆದರೆ, ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ “ಬಿಗ್ಬಾಸ್ ನ ಕಣ್ಗಾವಲು ಕ್ಷಣ” ಎಂದು ಕರೆದಿದ್ದಾರೆ. ಕೆಲವರು ಇದನ್ನು ಪೆಗಾಸಸ್ ಸ್ಪೈವೇರ್ ಪ್ರೋಗ್ರಾಂಗೆ ಹೋಲಿಸಿದ್ದಾರೆ.
ಸಂಚಾರ ಸಾಥಿ ಯಾವ ಸೇವೆಗಳನ್ನು ಒದಗಿಸುತ್ತದೆ?
ಬಳಕೆದಾರರ ಹೆಸರಿನಲ್ಲಿರುವ ಮೊಬೈಲ್ ಸಂಪರ್ಕಗಳ ಸಂಖ್ಯೆಯನ್ನು ತಿಳಿದುಕೊಳ್ಳಲು ಮತ್ತು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ವಿಶ್ವಾಸಾರ್ಹ ಸಂಪರ್ಕ ವಿವರಗಳನ್ನು ಪರಿಶೀಲಿಸಲು ನೆರವಾಗುತ್ತದೆ.ಬಳಕೆದಾರರರು ಅಪ್ಲಿಕೇಶನ್ ಮೂಲಕ ವಂಚನೆ ವರದಿ ಮಾಡುವಾಗ ತಮ್ಮ ಐಎಂಇಐ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ.
ಈ ಅಪ್ಲಿಕೇಶನ್ ಬಳಕೆದಾರರ ಹೆಸರಿನಲ್ಲಿರುವ ಮೊಬೈಲ್ ಸಂಪರ್ಕಗಳನ್ನು ಪರಿಶೀಲಿಸುವುದು. ಹ್ಯಾಂಡ್ಸೆಟ್ ನಿಜವೇ ಎಂದು ಪರಿಶೀಲಿಸುವುದು ಮತ್ತು ಅನುಮಾನಾಸ್ಪದ ಸಂವಹನ ಅಥವಾ ಸ್ಪ್ಯಾಮ್ಗಳನ್ನು ವರದಿ ಮಾಡುವಂತಹ ಸೇವೆಗಳನ್ನು ಒದಗಿಸುತ್ತದೆ.ಪೋನ್ನಲ್ಲಿ ಒಟಿಪಿ ಪರಿಶೀಲನೆ ಇಲ್ಲದೆಯೇ, ಭಾರತೀಯ ಸಂಖ್ಯೆ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಕರೆಯನ್ನೂ ವರದಿ ಮಾಡಲು ಅವಕಾಶ ನೀಡುತ್ತದೆ.
ಸಂಚಾರ ಸಾಥಿಯ ಲಾಭವೇನು?
ಈ ವೆಬ್ಸೈಟ್ ಪ್ರಕಾರ ಯೋಜನೆಯಡಿ 42.14 ಲಕ್ಷಕ್ಕೂ ಹೆಚ್ಚು ಮೊಬೈಲ್ಗಳನ್ನು ಬ್ಲಾಕ್ ಮಾಡಲಾಗಿದೆ. 26.11 ಲಕ್ಷಕ್ಕೂ ಹೆಚ್ಚು ಕಳೆದು ಹೋದ ಮೊಬೈಲ್ ಸೆಟ್ ಗಳನ್ನು ಪತ್ತೆಹಚ್ಚಲಾಗಿದೆ. ತಮ್ಮ ಹೆಸರಿನಲ್ಲಿರುವ ನೋಂದಾಯಿಸಲಾದ ಮೊಬೈಲ್ ಸಂಪರ್ಕಗಳ ಮಾಹಿತಿ ಪಡೆಯಲು ಬಯಸುವ ವ್ಯಕ್ತಿಗಳಿಂದ 288 ಲಕ್ಷಕ್ಕೂ ಹೆಚ್ಚು ವಿನಂತಿಗಳನ್ನು ಸ್ವೀಕರಿಸಲಾಗಿದ್ದು, 254 ಲಕ್ಷಕ್ಕೂ ಹೆಚ್ಚು ವಿನಂತಿಗಳನ್ನು ಪರಿಹರಿಸಲಾಗಿದೆ. ಪ್ರಸ್ತುತ ಅಪ್ಲಿಕೇಶನ್ 1.14 ಕೋಟಿಗೂ ಹೆಚ್ಚು ನೋಂದಣಿಗಳನ್ನು ಹೊಂದಿದೆ. ಗೂಗಲ್ ಪ್ಲೇಸ್ಟೋರ್ನಿಂದ 1 ಕೋಟಿಗೂ ಹೆಚ್ಚು ಡೌನ್ಲೋಡ್ಗಳು ಮತ್ತು ಆಪಲ್ ಸ್ಟೋರ್ನಿಂದ 9.5 ಲಕ್ಷಕ್ಕೂ ಹೆಚ್ಚು ಡೌನ್ಲೋಡ್ ಆಗಿದೆ.
ಅಪ್ಲಿಕೇಶನ್ ಕಡ್ಡಾಯ?
ಇದೀಗ ತಯಾರಿಸಿ ಚಾಲ್ತಿಯಲ್ಲಿರುವ ಸಾಧನಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಸಾಫ್ಟ್ವೇರ್ ನವೀಕರಣದ ಮೂಲಕ ತೂರಿಸುವಂತೆ ಕೇಂದ್ರ ಸರ್ಕಾರ ಫೋನ್ ತಯಾರಕರಿಗೆ ತಿಳಿಸಿದೆ. ಈ ನವೀಕರಣಕ್ಕೆ 90 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ವಿವಾದದ ನಂತರ ಸಮಜಾಯಿಶಿ ನೀಡಿದರೂ, ಆದೇಶವನ್ನು ಹಿಂಪಡೆದಿಲ್ಲ.







