ಪ್ರಾಣವನ್ನೇ ಪಣಕ್ಕಿಟ್ಟು ಗಾಯಾಳುಗಳ ನೆರವಿಗೆ ಧಾವಿಸಿದ ರಹ್ಮತ್ ಪಾಶಾ; ತೆಲಂಗಾಣ ಮೂಲದ ವ್ಯಕ್ತಿಯ ದಿಟ್ಟತನಕ್ಕೆ ಆಸ್ಟ್ರೇಲಿಯದಲ್ಲಿ ವ್ಯಾಪಕ ಪ್ರಶಂಸೆ

Photo Credit : timesnownews
ಹೈದರಾಬಾದ್: ಆಸ್ಟ್ರೇಲಿಯಾದ ಬೊಂಡಿ ಬೀಚ್ ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿ ಸಂದರ್ಭ, ತೆಲಂಗಾಣ ಮೂಲದ 37 ವರ್ಷದ ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನೇ ಒತ್ತೆಯಿಟ್ಟು ಗುಂಡೇಟಿನಿಂದ ಗಾಯಗೊಂಡವರ ನೆರವಿಗೆ ಧಾವಿಸುವ ಮೂಲಕ ಅಪ್ರತಿಮ ಧೈರ್ಯವನ್ನು ಪ್ರದರ್ಶಿಸಿದ್ದಾರೆ. 2019ರಿಂದ ಆಸ್ಟ್ರೇಲಿಯದಲ್ಲಿ ವಾಸವಾಗಿರುವ ಮುಹಮ್ಮದ್ ರಹ್ಮತ್ ಪಾಶಾ ಅವರು ಅಪಾಯ ಸನ್ನಿವೇಶದಲ್ಲೂ ಗಾಯಾಳುಗಳ ಶುಶ್ರೂಷೆ ಮಾಡಿದ್ದಲ್ಲದೆ, ಅವರನ್ನು ಆ್ಯಂಬುಲೆನ್ಸ್ ಗಳಿಗೆ ಕೊಂಡೊಯ್ಯಲು ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ನೆರವಾಗಿದ್ದರು.
ದಾಳಿಕೋರನೊಬ್ಬ ಗುಂಡುಹಾರಿಸುತ್ತಾ ಮುನ್ನುಗ್ಗಿ ಬರುತ್ತಿರುವುದನ್ನು ಕಂಡು ಬೀಚ್ ನಲ್ಲಿದ್ದ ಜನರು ಭಯಭೀತರಾಗಿ ಓಡತೊಡಗಿದರು. ಸ್ಥಳದಲ್ಲಿದ್ದ ಪಾಶಾ ಕೂಡಾ ಹೆದರಿದ್ದರಾದರೂ, ಧೈರ್ಯ ವಹಿಸಿ ಗಾಯಾಳುಗಳ ನೆರವಿಗೆ ಧಾವಿಸಿದರು. ಕಾಲಿಗೆ ಗುಂಡೇಟು ಬಿದ್ದು, ನೆರವಿಗಾಗಿ ಕೂಗುತ್ತಿದ್ದ ಮಹಿಳೆಯ ಬಳಿ ತೆರಳಿದ ಅವರು, ಆಕೆಯನ್ನು ಸಂತೈಸಿದರು ಮತ್ತು ನೆರವು ಕಾರ್ಯಕರ್ತರು ಬರುವವರೆಗೂ ಆಕೆಯ ಸಮೀಪದಲ್ಲೇ ಇದ್ದರು ಎಂದು ಬೊಂಡಿ ಬೀಚ್ ದಾಳಿಯ ಘಟನೆಯನ್ನು ʼThe Hinduʼ ಸುದ್ದಿಸಂಸ್ಥೆ ಜೊತೆ ಪಾಶಾ ಸ್ಮರಿಸಿಕೊಂಡರು.
ಸಂಜೆ 7 ಗಂಟೆಯ ಸುಮಾರಿಗೆ ಗುಂಡಿನ ದಾಳಿ ನಡೆದಾಗ, ಮೊದಲಿಗೆ ಪಾಶಾ ಅವರು ಇದೊಂದು ಪಟಾಕಿಯ ಸದ್ದೆಂದು ಭಾವಿಸಿದ್ದರು. ಆದರೆ ಜನರು ಕಿರುಚುತ್ತಾ ದಿಕ್ಕುಪಾಲಾಗಿ ಓಡುತ್ತಿರುವುದನ್ನು ಮತ್ತು ಇನ್ನು ಕೆಲವರು ಕುಸಿದು ಬೀಳುತ್ತಿರುವುದನ್ನು ಕಂಡಾಗ ಅವರಿಗೆ ಪರಿಸ್ಥಿತಿಯ ಗಂಭೀರತೆಯ ಅರಿವಾಯಿತು.
ವೃತ್ತಿಯಲ್ಲಿ ಬಾಣಸಿಗರಾದ ಪಾಶಾ ಅವರು ಮೂರು ಮಕ್ಕಳ ತಂದೆ. ಈ ಘಟನೆಯು ತನ್ನ ಮೇಲೆ ತೀವ್ರ ಭಾವಾನಾತ್ಮಕ ಪರಿಣಾಮವನ್ನು ಬೀರಿದೆಯೆಂದು ಅವರು ಹೇಳಿದ್ದಾರೆ.
"ನನ್ನ ಕಣ್ಣಮುಂದೆಯೇ ದಾಳಿಯಲ್ಲಿ ಸಾವನ್ನಪ್ಪಿದವರ ಹಾಗೂ ನಾನು ರಕ್ಷಿಸಲು ಯತ್ನಿಸಿದ ಗಾಯಾಳುಗಳ ನೆನಪು ಇನ್ನೂ ನನ್ನನ್ನು ಕಾಡುತ್ತಿದೆ. ಘಟನೆ ನಡೆದಾಗಿನಿಂದ ನಾನು ಕೆಲಸಕ್ಕೆ ಹಿಂತಿರುಗಿಲ್ಲ, ಅಲ್ಲದೆ ನಾನು ಸರಿಯಾಗಿ ನಿದ್ರಿಸಿಲ್ಲ" ಎಂದು ಪಾಶಾ ತಿಳಿಸಿದ್ದಾರೆ.
ಬೊಂಡಿ ಬೀಚ್ ದಾಳಿ ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಭರಿತ ಪೋಸ್ಟ್ ಗಳು ಹರಿದಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪಾಶಾ ಅವರು, ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಹಾಗೂ ಎಲ್ಲಾ ರೀತಿಯ ವಿಭಿನ್ನತೆಗಳನ್ನು ಮೀರಿ ಅದರ ವಿರುದ್ಧ ಮಾನವಕುಲ ಒಗ್ಗೂಡಬೇಕಾಗಿದೆ ಎಂದು ಹೇಳಿದ್ದಾರೆ.
ಪಾಶಾ ಅವರ ದಿಟ್ಟತನ, ಮಾನವೀಯತೆಗೆ ಆಸ್ಟ್ರೇಲಿಯಾದ ಜನತೆ ಅಭಿನಂದಿಸುತ್ತಿದ್ದರೆ, ಭಾರತದಲ್ಲಿರುವ ಕುಟುಂಬಿಕರು, ಈ ಯಾತನಾಮಯ ನೆನಪಿನಿಂದ ಚೇತರಿಸಿಕೊಳ್ಳಲು ಶೀಘ್ರದಲ್ಲೇ ಅವರು ತಾಯ್ನಾಡಿಗೆ ವಾಪಸಾಗಲಿದ್ದಾರೆಂಬ ಆಶಾವಾದವನ್ನು ಹೊಂದಿದ್ದಾರೆ.







