ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಿತಿನ್ ನಬಿನ್

Photo credit: X/ANI
ಹೊಸದಿಲ್ಲಿ: ಮಂಗಳವಾರ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಸದ್ಯ ಕೇಂದ್ರ ಸಚಿವರಾಗಿರುವ ಜೆ.ಪಿ.ನಡ್ಡಾರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ 45 ವರ್ಷದ ನಿತಿನ್ ನಬಿನ್, ಅತ್ಯಂತ ಕಿರಿಯ ವಯಸ್ಸಿನಲ್ಲಿ ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾದ ಹಿರಿಮೆಗೆ ಪಾತ್ರರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತಿತರ ಹಿರಿಯ ಬಿಜೆಪಿ ನಾಯಕರೆದುರು ನಿತಿನ್ ನಬಿನ್ ಪ್ರಮಾಣ ವಚನ ಸ್ವೀಕರಿಸಿದರು.
ಇದಕ್ಕೂ ಮುನ್ನ, ಝಂದೇವಾಲನ್ ದೇವಾಲಯ, ವಾಲ್ಮೀಕಿ ದೇವಾಲಯ ಹಾಗೂ ಕನ್ಹಾಟ್ ಪ್ಲೇಸ್ ನಲ್ಲಿರುವ ಹನುಮಾನ್ ದೇವಾಲಯ ಸೇರಿದಂತೆ ದಿಲ್ಲಿಯ ವಿವಿಧ ಹೆಸರಾಂತ ದೇವಸ್ಥಾನಗಳಿಗೆ ನಿತಿನ್ ನಬಿನ್ ಭೇಟಿ ನೀಡಿದರು.
ಬಿಜೆಪಿಯ ನೂತನ ಅಧ್ಯಗಕ್ಷರಾಗಿ ಆಯ್ಕೆಯಾಗಿರುವ ನಿತಿನ್ ನಬಿನ್ ರಿಗೆ ಝೆಡ್ ದರ್ಜೆಯ ಭದ್ರತೆ ನೀಡಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ. ಝೆಡ್ ದರ್ಜೆಯ ಭದ್ರತೆಯಡಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಕಮಾಂಡೊಗಳು ಅವರಿಗೆ ಭದ್ರತೆ ನೀಡಲಿದ್ದಾರೆ.
ನಿತಿನ್ ನಬಿನ್ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೂ ಕೆಲವೇ ದಿನಗಳ ಮುನ್ನ ಅವರಿಗೆ ಜೀವ ಬೆದರಿಕೆ ಇದೆ ಎಂದು ಗುಪ್ತಚರ ದಳ ನೀಡಿದ ಸುಳಿವನ್ನು ಆಧರಿಸಿ ಅವರಿಗೆ ಝೆಡ್ ದರ್ಜೆಯ ಭದ್ರತೆಯನ್ನು ಮಂಜೂರು ಮಾಡಲಾಗಿತ್ತು ಎಂದೂ ಮೂಲಗಳು ತಿಳಿಸಿವೆ.
ನಿನ್ನೆಯಷ್ಟೇ ಬಿಹಾರ ಸಚಿವರಾಗಿರುವ ನಿತಿನ್ ನಬಿನ್ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.







