ವಿಮಾನ ದುರಂತದಲ್ಲಿ ಅಜಿತ್ ಪವಾರ್ ನಿಧನ: ಶೋಕ ವ್ಯಕ್ತಪಡಿಸಿದ 'ಸಾಮ್ನಾ'

Photo Credit: The Hindu
ಮುಂಬೈ, ಜ.29: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಧನಕ್ಕೆ ಶಿವಸೇನೆ (ಯುಬಿಟಿ) ಮುಖವಾಣಿ ಸಾಮ್ನಾ ಗುರುವಾರ ಶೋಕ ವ್ಯಕ್ತಪಡಿಸಿದೆ. ರಾಜ್ಯ ರಾಜಕೀಯಕ್ಕೆ ಅವರು ನೀಡಿದ ಕೊಡುಗೆ ಮತ್ತು ಅವರ ನಾಯಕತ್ವದ ಗುಣಗಳನ್ನು ಸಂಪಾದಕೀಯದಲ್ಲಿ ಸ್ಮರಿಸಲಾಗಿದೆ.
ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರ ನೆರಳಿನಲ್ಲಿ ರಾಜಕೀಯ ಜೀವನ ಆರಂಭಿಸಿದರೂ, ಕ್ರಮೇಣ ಸ್ವತಂತ್ರ ನಾಯಕತ್ವವನ್ನು ರೂಪಿಸಿಕೊಂಡ ನಾಯಕನಾಗಿದ್ದರು ಎಂದು ಸಾಮ್ನಾ ಹೇಳಿದೆ. ಅವರ ಅಕಾಲಿಕ ಮಣವು ಮಹಾರಾಷ್ಟ್ರಕ್ಕೆ ಭಾರೀ ನಷ್ಟವಾಗಿದ್ದು, ರಾಜ್ಯವು ಬಲಿಷ್ಠ ಹಾಗೂ ವಿಶಾಲ ಹೃದಯದ ನಾಯಕನನ್ನು ಕಳೆದುಕೊಂಡಿದೆ ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ.
ಸಾರ್ವಜನಿಕ ಜೀವನದಲ್ಲಿ ಸದಾ ಚುರುಕಿನಿಂದ ತೊಡಗಿಸಿಕೊಂಡಿದ್ದ ಅವರು ನಿರಂತರ ಚಲನಶೀಲ ನಾಯಕನಾಗಿದ್ದರು ಎಂದು ʼಸಾಮ್ನಾʼ ಸಂಪಾದಕೀಯ ಉಲ್ಲೇಖಿಸಿದೆ. ಶರದ್ ಪವಾರ್ ಅವರ ಮಾರ್ಗದರ್ಶನದಲ್ಲಿ ರಾಜಕೀಯವಾಗಿ ಬೆಳೆದರೂ, ಅಜಿತ್ ಪವಾರ್ ಅವರು ತಮ್ಮ ಕಾರ್ಯಕ್ಷಮತೆ ಮತ್ತು ಸಾಧನೆಗಳ ಮೂಲಕ ವಿಭಿನ್ನ ರಾಜಕೀಯ ಗುರುತನ್ನು ನಿರ್ಮಿಸಿಕೊಂಡಿದ್ದರು ಎಂದು ಅದು ತಿಳಿಸಿದೆ.
ಸಮಯಪಾಲನೆ, ಶಿಸ್ತಿಗೆ ಆದ್ಯತೆ ನೀಡುತ್ತಿದ್ದ ನೇರ ಹಾಗೂ ದಕ್ಷ ಆಡಳಿತಗಾರರಾಗಿದ್ದ ಅಜಿತ್ ಪವಾರ್, ಪೊಳ್ಳು ಭರವಸೆಗಳಿಗಿಂತ ಕಾರ್ಯದ ಮೂಲಕ ಮಾತುಗಳನ್ನು ಸಾಬೀತುಪಡಿಸುವ ರಾಜಕೀಯ ಶೈಲಿಯನ್ನು ಹೊಂದಿದ್ದರು ಎಂದು ಸಾಮ್ನಾ ಪ್ರಶಂಸಿಸಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.







