ಈವರೆಗಿನ ಪೂರ್ಣಾವಧಿ ಲೋಕಸಭೆಗಳಲ್ಲಿ ಅತ್ಯಂತ ಕಡಿಮೆ ಬೈಠಕ್ಗಳನ್ನು ಕಂಡ 17ನೇ ಲೋಕಸಭೆ
![ಈವರೆಗಿನ ಪೂರ್ಣಾವಧಿ ಲೋಕಸಭೆಗಳಲ್ಲಿ ಅತ್ಯಂತ ಕಡಿಮೆ ಬೈಠಕ್ಗಳನ್ನು ಕಂಡ 17ನೇ ಲೋಕಸಭೆ ಈವರೆಗಿನ ಪೂರ್ಣಾವಧಿ ಲೋಕಸಭೆಗಳಲ್ಲಿ ಅತ್ಯಂತ ಕಡಿಮೆ ಬೈಠಕ್ಗಳನ್ನು ಕಂಡ 17ನೇ ಲೋಕಸಭೆ](https://www.varthabharati.in/h-upload/2024/02/12/1243098-lok-sabha-new-1600.webp)
ಲೋಕಸಭೆ | Photo : PTI
ಹೊಸದಿಲ್ಲಿ: 17ನೇ ಲೋಕಸಭೆಯು ಜೂನ್ 2019ರಿಂದ ಫೆಬ್ರವರಿ 2024ರವರೆಗೆ ತನ್ನ ಅಧಿವೇಶನಗಳನ್ನು ನಡೆಸಿದೆ. ಈ ಐದು ವರ್ಷಗಳಲ್ಲಿ ಲೋಕಸಭೆಯು ಶೇ.88ರಷ್ಟು ತನ್ನ ನಿಗದಿತ ಕಾಲಾವಧಿಗೆ ಕಾರ್ಯನಿರ್ವಹಿಸಿದರೆ ಇದು ರಾಜ್ಯಸಭೆಯಲ್ಲಿ ಶೇ.73ರಷ್ಟಾಗಿದೆ.
ಸೆಪ್ಟಂಬರ್ 2023ರಲ್ಲಿ ಸಂಸತ್ತು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು.
17ನೇ ಲೋಕಸಭೆಯು ಈವರೆಗಿನ ಪೂರ್ಣಾವಧಿಯ ಲೋಕಸಭೆಗಳಲ್ಲಿ ಅತ್ಯಂತ ಕಡಿಮೆ ಬೈಠಕ್ಗಳನ್ನು ಕಂಡಿದ್ದು,ಇದೇ ಮೊದಲ ಬಾರಿಗೆ ಉಪಸ್ಪೀಕರ್ ಆಯ್ಕೆಯಾಗಿರಲಿಲ್ಲ.
► 17ನೇ ಲೋಕಸಭೆಯು ಒಟ್ಟು 274 ಬೈಠಕ್ಗಳನ್ನು ನಡೆಸಿತ್ತು. ಹಿಂದಿನ ಕೇವಲ ನಾಲ್ಕು ಲೋಕಸಭೆಗಳು ಕಡಿಮೆ ಬೈಠಕ್ಗಳನ್ನು ನಡೆಸಿದ್ದು,ಅವೆಲ್ಲವೂ ಐದು ವರ್ಷಗಳ ಅವಧಿ ಪೂರ್ಣಗೊಳ್ಳುವ ಮುನ್ನವೇ ವಿಸರ್ಜನೆಗೊಂಡಿದ್ದವು. 17ನೇ ಲೋಕಸಭೆಯಲ್ಲಿ ಅತ್ಯಂತ ಕಡಿಮೆ ಬೈಠಕ್ಗಳು (33 ದಿನಗಳು) 2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ನಡೆದಿದ್ದವು.
► ಈ ಲೋಕಸಭೆಯ ಅವಧಿಯಲ್ಲಿ 15 ಅಧಿವೇಶನಗಳ ಪೈಕಿ 11 ನಿಗದಿತ ಸಮಯಕ್ಕಿಂತ ಮೊದಲೇ ಮುಂದೂಡಲ್ಪಟ್ಟಿದ್ದವು. ಪರಿಣಾಮವಾಗಿ 40 ನಿಗದಿತ ಬೈಠಕ್ಗಳು (ಶೇ.13) ನಡೆದಿರಲಿಲ್ಲ. ಮೊದಲ ಮತ್ತು ಕೊನೆಯ ಅಧಿವೇಶನಗಳು ಅನುಕ್ರಮವಾಗಿ ಏಳು ಮತ್ತು ಒಂದು ಬೈಠಕ್ಗಳಿಂದ ವಿಸ್ತರಣೆಗೊಂಡಿದ್ದವು.
► ಸಂವಿಧಾನದ 93ನೇ ವಿಧಿಯಂತೆ ಲೋಕಸಭೆಯು ಸಾಧ್ಯವಾದಷ್ಟು ಶೀಘ್ರ ಸ್ಪೀಕರ್ ಮತ್ತು ಉಪಸ್ಪೀಕರ್ ಆಯ್ಕೆ ಮಾಡುವದು ಅಗತ್ಯವಾಗಿದೆ. ಇದು ತನ್ನ ಇಡೀ ಅವಧಿಯಲ್ಲಿ ಉಪಸ್ಪೀಕರ್ ಆಯ್ಕೆ ಮಾಡಿರದ ಮೊದಲ ಲೋಕಸಭೆಯಾಗಿದೆ.
► 17ನೇ ಲೋಕಸಭೆಯ ಅವಧಿಯಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ 206 ಸಂದರ್ಭಗಳಲ್ಲಿ ಸಂಸದರನ್ನು ಅಮಾನತುಗೊಳಿಸಲಾಗಿತ್ತು. 2023ರ ಚಳಿಗಾಲದ ಅಧಿವೇಶನದಲ್ಲಿ ಗಂಭೀರ ದುರ್ವರ್ತನೆಗಾಗಿ 146 ಸಂಸದರನ್ನು ಸದನದಿಂದ ಅಮಾನತುಗೊಳಿಸಲಾಗಿತ್ತು. ಕ್ರಿಮಿನಲ್ ಕಾನೂನುಗಳ ಸುಧಾರಣೆಗಾಗಿ ನೂತನ ಮಸೂದೆಗಳಂತಹ ಹಲವಾರು ಪ್ರಮುಖ ವಿಧೇಯಕಗಳು ಸಂಸದರನ್ನು ಅಮಾನತುಗೊಳಿಸಿದ ಬಳಿಕ ಅಂಗೀಕಾರಗೊಂಡಿದ್ದವು.
► ಹಣಕಾಸು ಮತ್ತು ಧನವಿನಿಯೋಗ ಮಸೂದೆಗಳನ್ನು ಹೊರತು ಪಡಿಸಿ ಒಟ್ಟು 179 ಮಸೂದೆಗಳು ಅಂಗೀಕಾರಗೊಂಡಿದ್ದವು. ಶೇ.58ರಷ್ಟು ಮಸೂದೆಗಳು ಅವು ಮಂಡಿಸಲ್ಪಟ್ಟ ಎರಡು ವಾರಗಳಲ್ಲಿ ಅಂಗೀಕಾರಗೊಂಡಿದ್ದವು. ಜಮ್ಮು-ಕಾಶ್ಮೀರ ಪುನರ್ಸಂಘಟನೆ ಮಸೂದೆ,2019 ಮತ್ತು ಮಹಿಳಾ ಮೀಸಲಾತಿ ಮಸೂದೆ,2023 ಎರಡೇ ದಿನಗಳಲ್ಲಿ ಅಂಗೀಕರಿಸಲ್ಪಟ್ಟಿದ್ದವು. ಶೇ.35ರಷ್ಟು ಮಸೂದೆಗಳು ಲೋಕಸಭೆಯಲ್ಲಿ ಅರ್ಧ ಗಂಟೆಗೂ ಕಡಿಮೆ ಚರ್ಚೆಗಳ ಬಳಿಕ ಅಂಗೀಕಾರಗೊಂಡಿದ್ದರೆ ರಾಜ್ಯಸಭೆಯಲ್ಲಿ ಇದು ಶೇ.34 ಆಗಿತ್ತು.
► ಈ ಲೋಕಸಭೆಯ ವಿಸರ್ಜನೆಯೊಂದಿಗೆ ಮಂಡನೆಯಾಗಿರುವ ನಾಲ್ಕು ಮಸೂದೆಗಳು ರದ್ದಾಗಲಿದ್ದು,ಇದು ಈವರೆಗಿನ ಎಲ್ಲ ಲೋಕಸಭೆಗಳಲ್ಲಿ ಕನಿಷ್ಠ ಸಂಖ್ಯೆಯಾಗಿದೆ. ಅಂತರರಾಜ್ಯ ನದಿ ನೀರು ವಿವಾದಗಳ (ತಿದ್ದುಪಡಿ) ಮಸೂದೆ 2019,ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಮಸೂದೆ 2021 ಮತ್ತು ವಿದ್ಯುತ್ (ತಿದ್ದುಪಡಿ) ಮಸೂದೆ 2022 ಇವು ರದ್ದಾಗಲಿರುವ ಮಸೂದೆಗಳಲ್ಲಿ ಸೇರಿವೆ. ಕೊನೆಯ ಎರಡು ಮಸೂದೆಗಳನ್ನು ಸಮಿತಿಗಳಿಗೆ ಸಲ್ಲಿಸಲಾಗಿದ್ದು,ಅವುಗಳ ವರದಿಗಾಗಿ ಕಾಯಲಾಗುತ್ತಿದೆ.
► 17ನೇ ಲೋಕಸಭೆಯಲ್ಲಿ 729 ಖಾಸಗಿ ಸದಸ್ಯರ ಮಸೂದೆಗಳು ಮಂಡಿಸಲ್ಪಟ್ಟಿದ್ದು.ಇದು ಹಿಂದಿನ ಎಲ್ಲ ಲೊಕಸಭೆಗಳಿಗಿಂತ ಹೆಚ್ಚು(16ನೇ ಲೋಕಸಭೆಯನ್ನು ಹೊರತುಪಡಿಸಿ),ಆದರೆ ಇಂತಹ ಎರಡು ಮಸೂದೆಗಳನ್ನು ಮಾತ್ರ ಚರ್ಚಿಸಲಾಗಿತ್ತು.
► ಲೋಕಸಭೆಯ ಒಟ್ಟು ಕಾರ್ಯನಿರ್ವಹಣೆ ಅವಧಿಯಲ್ಲಿ ಶೇ.31ರಷ್ಟನ್ನು ಶಾಸನ ಮತ್ತು ಬಜೆಟ್ಗಳನ್ನು ಹೊರತುಪಡಿಸಿ ಇತರ ವಿಷಯಗಳ ಚರ್ಚೆಗೆ ವ್ಯಯಿಸಲಾಗಿತ್ತು. ಇವುಗಳಲ್ಲಿ ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣ,ಸಾರ್ವಜನಿಕ ಮಹತ್ವದ ವಿಷಯಗಳು ಮತ್ತು ವಿಶ್ವಾಸ ಮತಗಳ ಮೇಲಿನ ಚರ್ಚೆಗಳು ಸೇರಿವೆ.
► 17ನೇ ಲೋಕಸಭೆಯಲ್ಲಿ ಪ್ರಶೋತ್ತರ ಕಲಾಪವು ಶೇ.60ರಷ್ಟು ನಿಗದಿತ ಅವಧಿಗೆ ನಡೆದಿತ್ತು. ಕೋವಿಡ್ನಿಂದಾಗಿ 2020ರ ಮಳೆಗಾಲದ ಅಧಿವೇಶನದಲ್ಲಿ ಪ್ರಶ್ನೆ ಸಮಯವನ್ನು ರದ್ದುಗೊಳಿಸಲಾಗಿತ್ತು. 2023ರ ವಿಶೇಷ ಅಧಿವೇಶನದಲ್ಲಿ ಯಾವುದೇ ಪ್ರಶ್ನೆಗೆ ಅವಕಾಶವಿರಲಿಲ್ಲ.
► ಈ ಎಲ್ಲ ವರ್ಷಗಳಲ್ಲಿ ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಸಮಯ ಕಡಿಮೆಯಾಗುತ್ತಲೇ ಬಂದಿದೆ. 17ನೇ ಲೋಕಸಭೆಯು ವಾರ್ಷಿಕ ಬಜೆಟ್ನ್ನು ಸರಾಸರಿ 35 ಗಂಟೆಗಳ ಕಾಲ ಚರ್ಚಿಸಿತ್ತು. 2019-2023ರ ನಡುವೆ ಸರಾಸರಿ ಬಜೆಟ್ನ ಶೇ.80ರಷ್ಟನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಗಿತ್ತು. 2023ರಲ್ಲಿ ಇಡೀ ಬಜೆಟ್ನ್ನು ಚರ್ಚೆಯೇ ಇಲ್ಲದೇ ಅಂಗೀಕರಿಸಲಾಗಿತ್ತು. ಕಳೆದ ದಶಕದಲ್ಲಿ 2018 ಮತ್ತು 2013ರಲ್ಲಿ ಎರಡು ಬಾರಿ ಇದು ಸಂಭವಿಸಿತ್ತು.
► 17ನೇ ಲೋಕಸಭೆಯ ಅವಧಿಯಲ್ಲಿ ಸಂಸದೀಯ ಸಮಿತಿಗಳು ಸುಮಾರು 1,700 ಸಭೆಗಳನ್ನು ನಡೆಸಿದ್ದು,ಪ್ರತಿ ಸಭೆಯ ಸರಾಸರಿ ಅವಧಿ ಸುಮಾರು ಎರಡು ಗಂಟೆಗಳಾಗಿದ್ದವು.