ತಮಿಳುನಾಡು | ಪತ್ನಿಯ ಜೊತೆ ಭಿನ್ನಾಭಿಪ್ರಾಯ : 4 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆ ದೇವಾಲಯದ ಹುಂಡಿಗೆ ಹಾಕಿದ ಮಾಜಿ ಯೋಧ!

ಸಾಂದರ್ಭಿಕ ಚಿತ್ರ
ಚೆನ್ನೈ : ತಮಿಳುನಾಡಿನಲ್ಲಿ ಪತ್ನಿ ಮತ್ತು ಮಕ್ಕಳ ಜೊತೆಗಿನ ಭಿನ್ನಾಭಿಪ್ರಾಯದಿಂದ ನಿವೃತ್ತ ಸೇನಾಧಿಕಾರಿಯೋರ್ವ 4 ಕೋಟಿ ರೂ. ಮೌಲ್ಯದ ಆಸ್ತಿಯ ದಾಖಲೆಯನ್ನು ದೇವಾಲಯದ ಹುಂಡಿಗೆ ಹಾಕಿರುವ ಅಪರೂಪದ ಘಟನೆ ನಡೆದಿದೆ.
ತಮಿಳುನಾಡಿನ ಅರುಲ್ಮಿಗು ರೇಣುಗಾಂಬಳ್ ಅಮ್ಮನ್ ದೇವಸ್ಥಾನದಲ್ಲಿ ದೇವಾಲಯ ಪ್ರಾಧಿಕಾರದ ಸದಸ್ಯರು ಪ್ರತಿ ಎರಡು ತಿಂಗಳಿಗೊಮ್ಮೆ ಭಕ್ತರಿಂದ ಬರುವ ದೇಣಿಗೆಗಳನ್ನು, ಎಣಿಸುವುದು ಸಾಮಾನ್ಯವಾಗಿದೆ.
ಜೂನ್ 24ರಂದು ದೇವಾಲಯದ ಹುಂಡಿಗಳನ್ನು ಪರಿಶೀಲನೆಯ ವೇಳೆ 11 'ಹುಂಡಿ'ಗಳಲ್ಲಿ ಒಂದರಲ್ಲಿ 4 ಕೋಟಿ ಮೌಲ್ಯದ ಎರಡು ಆಸ್ತಿಗಳ ಮೂಲ ದಾಖಲೆಗಳು ಪತ್ತೆಯಾಗಿದೆ. ಇದನ್ನು ನೋಡಿ ದೇವಾಲಯ ಪ್ರಾಧಿಕಾರದ ಸದಸ್ಯರು ಅಚ್ಚರಿಗೊಂಡಿದ್ದಾರೆ.
ಅರುಲ್ಮಿಗು ರೇಣುಗಾಂಬಳ್ ಅಮ್ಮನ್ ದೇವಸ್ಥಾನ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಅರಣಿ ಪಟ್ಟಣದಲ್ಲಿದೆ. ಮೂಲ ಆಸ್ತಿ ದಾಖಲೆಗಳನ್ನು ದಾನ ಮಾಡಿದ ಭಕ್ತನನ್ನು ನಿವೃತ್ತ ಸೇನಾಧಿಕಾರಿ ಎಸ್ ವಿಜಯನ್ ಎಂದು ಗುರುತಿಸಲಾಗಿದೆ.
ಕೇಶವಪುರಂ ಗ್ರಾಮದ ನಿವಾಸಿಯಾದ ವಿಜಯನ್ ಬಾಲ್ಯದಿಂದಲೂ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಪತ್ನಿ ವಿ ಕಸ್ತೂರಿ ಜೊತೆಗಿನ ಭಿನ್ನಾಭಿಪ್ರಾಯದ ನಂತರ ಅವರು ಸುಮಾರು 10 ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದಾರೆ.
ವಿಜಯನ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರೂ ವಿವಾಹಿತರು. ಅವರು ಚೆನ್ನೈ ಮತ್ತು ವೆಲ್ಲೂರಿನಲ್ಲಿ ವಾಸಿಸುತ್ತಿದ್ದಾರೆ. ತನಿಖೆಯ ವೇಳೆ ಹೆಣ್ಣುಮಕ್ಕಳು ಆಸ್ತಿಯನ್ನು ತಮಗೆ ವರ್ಗಾಯಿಸುವಂತೆ ಒತ್ತಡ ಹೇರುತ್ತಿದ್ದರು ಎಂದು ತಿಳಿದು ಬಂದಿದೆ.
ʼದೈನಂದಿನ ಖರ್ಚಿಗೂ ನನ್ನ ಮಕ್ಕಳು ನನ್ನನ್ನು ಅವಮಾನಿಸಿದರು. ನಾನು ನನ್ನ ಮಾತಿನಿಂದ ಹಿಂದೆ ಸರಿಯುವುದಿಲ್ಲ. ದೇವಾಲಯದ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ನಂತರ, ನಾನು ಕಾನೂನುಬದ್ಧವಾಗಿ ನನ್ನ ಆಸ್ತಿಯನ್ನು ದೇವಾಲಯಕ್ಕೆ ವರ್ಗಾಯಿಸುತ್ತೇನೆʼ ಎಂದು ವಿಜಯನ್ ಹೇಳಿರುವ ಬಗ್ಗೆ The Hindu ವರದಿ ಮಾಡಿದೆ.
ದೇವಾಲಯದಲ್ಲಿ ಸಲ್ಲಿಸಲಾದ ದಾಖಲೆಗಳು 10 ಸೆಂಟ್ಸ್ ಭೂಮಿ ಮತ್ತು ದೇವಾಲಯದ ಬಳಿ ಇರುವ ಒಂದು ಅಂತಸ್ತಿನ ಮನೆಗೆ ಸಂಬಂಧಿಸಿವೆ. ಅವುಗಳ ಒಟ್ಟಾರೆ ಮೌಲ್ಯ ಸುಮಾರು 4 ಕೋಟಿ ರೂ. ಆಗಿದೆ.
ವಿಜಯನ್ ಆಸ್ತಿ ದಾಖಲೆಗಳೊಂದಿಗೆ ಕೈಬರಹದ ಟಿಪ್ಪಣಿಯನ್ನು ಕೂಡ ಲಗತ್ತಿಸಿ, ದಾನಕ್ಕೆ ತನ್ನ ಒಪ್ಪಿಗೆಯನ್ನು ನೀಡಿದ್ದಾರೆ.
ಭಕ್ತ 'ಹುಂಡಿ'ಯಲ್ಲಿ ದಾಖಲೆಗಳನ್ನು ಹಾಕಿದ ಮಾತ್ರಕ್ಕೆ ದೇವಾಲಯವು ಸ್ವತ್ತುಗಳ ಮೇಲೆ ಸ್ವಯಂಚಾಲಿತವಾಗಿ ಹಕ್ಕು ಸಾಧಿಸಲು ಸಾಧ್ಯವಿಲ್ಲ. ದಾನಿಗಳು ಅಧಿಕೃತವಾಗಿ ಸಂಬಂಧಪಟ್ಟ ಇಲಾಖೆಯಲ್ಲಿ ನೋಂದಾಯಿಸಿದರೆ ಮಾತ್ರ ದೇವಾಲಯವು ಆಸ್ತಿಯ ಮೇಲೆ ಹಕ್ಕನ್ನು ಸಾಧಿಸಬಹುದಾಗಿದೆ.







