-60 ಡಿಗ್ರಿ ಉಷ್ಣಾಂಶ, ಕಡಿಮೆ ಆಮ್ಲಜನಕ: ವಿಮಾನದ ಲ್ಯಾಂಡಿಂಗ್ ಗೇರ್ ನಲ್ಲಿ ಅವಿತುಕೊಂಡು ಲಂಡನ್ ಗೆ ಬಂದಿದ್ದ ಭಾರತೀಯ ಸಹೋದರರು!

ಪ್ರದೀಪ್ ಸೈನಿ | PC : NDTV
ಹೊಸದಿಲ್ಲಿ: ರವಿವಾರ ಅಫ್ಘಾನಿಸ್ತಾನದ ವಿಮಾನ ಯಾನ ಸಂಸ್ಥೆ ಕ್ಯಾಮ್ ವಿಮಾನದಲ್ಲಿ ಕಾಬೂಲ್ ನಿಂದ ದಿಲ್ಲಿಗೆ ವಿಮಾನದ ಚಕ್ರಗಳಲ್ಲಿ ಅವಿತುಕೊಂಡು ಬಂದಿದ್ದ 13 ವರ್ಷದ ಬಾಲಕನ ಪ್ರಕರಣ ರೋಮಾಂಚನಗೊಳಿಸಿರುವ ಬೆನ್ನಿಗೇ, ಇಂತಹುದೇ ಮತ್ತೊಂದು ಪ್ರಕರಣದಲ್ಲಿ ಅಕ್ಟೋಬರ್ 1996ರಲ್ಲಿ ಭಾರತೀಯ ಸಹೋದರರಿಬ್ಬರು ವಿಮಾನದ ಲ್ಯಾಂಡಿಂಗ್ ಗೇರ್ ನಲ್ಲಿ ಅವಿತುಕೊಂಡು ಲಂಡನ್ ಗೆ ಪ್ರಯಾಣಿಸಿದ್ದ ಘಟನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಅಕ್ಟೋಬರ್ 1996ರಲ್ಲಿ ಬ್ರಿಟಿಷ್ ಏರ್ ವೇಸ್ ನ ಚಕ್ರದ ನಡುವೆ ಅವಿತುಕೊಂಡು ಪಂಜಾಬ್ ನ ಇಬ್ಬರು ಸಹೋದರರಾದ ಪ್ರದೀಪ್ ಸೈನಿ (23) ಹಾಗೂ ವಿಜಯ್ ಸೈನಿ (19) ವೀಸಾ ಅಥವಾ ಸಾಕಷ್ಟು ಹಣವಿಲ್ಲದೆ ಲಂಡನ್ ತಲುಪಲು ಮುಂದಾಗಿದ್ದರು.
ಸಿಖ್ ಪ್ರತ್ಯೇಕತಾವಾದಿಗಳ ಗುಂಪಿನೊಂದಿಗೆ ಸಂಪರ್ಕವಿದೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಈ ಇಬ್ಬರು ಕಾರ್ ಮೆಕಾನಿಕ್ ಗಳು ಭಾರತದಿಂದ ಪರಾರಿಯಾಗುವಂತಹ ಒತ್ತಡ ಸೃಷ್ಟಿಸಿತ್ತು. ಆದರೆ, ತಮ್ಮ ಬಳಿ ವೀಸಾ ಆಗಲಿ ಅಥವಾ ಸಾಕಷ್ಟು ಹಣವಾಗಲಿ ಇಲ್ಲದೆ ಇದ್ದುದರಿಂದ, ಅವರಿಬ್ಬರೂ ಅಂತಾರಾಷ್ಟ್ರೀಯ ವಿಮಾನದಲ್ಲಿ ಅತಿರೇಕದ ಸಾಹಸಕ್ಕೆ ಕೈ ಹಾಕಿದ್ದರು.
ವಿಮಾನ ನಿಲ್ದಾಣವನ್ನು ಒಳ ನುಸುಳುವಲ್ಲಿ ಯಶಸ್ವಿಯಾಗಿದ್ದ ಅವರಿಬ್ಬರು, ತಪಾಸಣೆಯನ್ನು ತಪ್ಪಿಸಿಕೊಂಡಿದ್ದರು ಹಾಗೂ ವಿಮಾನದ ಮುಂದಿನ ಚಕ್ರದಲ್ಲಿ ಅವಿತುಕೊಂಡಿದ್ದರು. ಆದರೆ, ಈ ಪ್ರಯಾಣ ಅವರ ಪಾಲಿಗೆ ಊಹಾತೀತ ಸವಾಲಾಗಿ ಪರಿಣಮಿಸಿತ್ತು.
35,000 ಅಡಿಯ ಎತ್ತರದಲ್ಲಿ ಉಷ್ಣಾಂಶವು -60 ಡಿಗ್ರಿ ಸೆಲ್ಸಿಯಸ್ ಗೆ ಕುಸಿದಿತ್ತು ಹಾಗೂ ಆಮ್ಲಜನಕದ ಪ್ರಮಾಣ ಅಪಾಯಕಾರಿ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ವಿಮಾನದ ಇಂಜಿನ್ ನಿಂದ ಹೊರ ಬರುತ್ತಿದ್ದ ಸದ್ದು ಕಿವಿಯ ತಮಟೆ ಒಡೆಯುವಂತಿತ್ತು ಹಾಗೂ ದೈಹಿಕ ನೋವು ಸಹಿಸಲಸಾಧ್ಯವಾಗಿತ್ತು.
ಆದರೆ, ಈ ಸಾಹಸದಲ್ಲಿ ವಿಜಯ್ ಸೈನಿ ಬದುಕುಳಿಯಲಿಲ್ಲ. ವಿಮಾನವು ಲಂಡನ್ ನ ಹೀತ್ರೋ ಕಡೆ ಇಳಿಯುತ್ತಿದ್ದಂತೆಯೇ, ಪರಿಸ್ಥಿತಿಯ ವೈಪರೀತ್ಯದಿಂದಾಗಿ ಆತನ ದೇಹ ನೆಲಕ್ಕೆ ಬಿದ್ದಿತ್ತು!
ಹೀಗಿದ್ದೂ, 10 ಗಂಟೆಗಳ ಪ್ರಯಾಣದಲ್ಲಿ ಬದುಕುಳಿಯುವಲ್ಲಿ ಯಶಸ್ವಿಯಾಗಿದ್ದ ಪ್ರದೀಪ್ ಸೈನಿ, ವಿಮಾನ ಭೂಸ್ಪರ್ಶ ಮಾಡಿದ ನಂತರ, ರನ್ ವೇ ಮೇಲೆ ಅನಾಥವಾಗಿ ಬಿದ್ದಿರುವುದು ಕಂಡು ಬಂದಿತ್ತು. ಗಂಭೀರ ಲಘು ಉಷ್ಣತೆಯ ಸಮಸ್ಯೆಯಿಂದಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಿ, ನಂತರ ವಶಕ್ಕೆ ಪಡೆಯಲಾಗಿತ್ತು.
ಆತ ಬದುಕುಳಿದಿದ್ದನ್ನು ವೈದ್ಯಕೀಯ ಪವಾಡ ಎಂದೇ ಇಂದಿಗೂ ಪರಿಗಣಿಸಲಾಗಿದೆ. ಆಮ್ಲಜನಕದ ಕೊರತೆ ಹಾಗೂ ಲಘು ಉಷ್ಣತೆಯ ಮಿಶ್ರಣಗಳೆರಡೂ ಆತನ ದೇಹವು ಕಠಿಣ ಪರಿಸ್ಥಿತಿಯನ್ನು ತಾಳಿಕೊಳ್ಳುವಂತೆ ಮಾಡಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸುದೀರ್ಘ ಕಾನೂನು ಹೋರಾಟದ ನಂತರ, ಆತ ಬ್ರಿಟನ್ ನಲ್ಲೇ ನೆಲೆಯೂರಿದ್ದ. ಆತನೀಗ ಲಂಡನ್ ನಲ್ಲಿ ವಾಸಿಸುತ್ತಿದ್ದು, ಲಂಡನ್ ನ ಹೀತ್ರೊ ವಿಮಾನ ನಿಲ್ದಾಣದಲ್ಲಿ ಉದ್ಯೋಗಿಯಾಗಿದ್ದಾನೆ.
2015ರಲ್ಲೂ ಕೂಡಾ ಜೊಹಾನ್ಸ್ ಬರ್ಗ್ ನಿಂದ ಲಂಡನ್ ಗೆ ಪ್ರಯಾಣ ಬೆಳೆಸಿದ್ದ ತೆಂಬಾ ಕಬೇಕಾ ಹಾಗೂ ಆತನ ಸ್ನೇಹಿತ ಕಾರ್ಲಿಟೊ ವೇಲ್ ವಿಮಾನದ ಲ್ಯಾಂಡಿಂಗ್ ಗೇರ್ ನಲ್ಲಿ ಅವಿತುಕೊಂಡಿದ್ದರು. ಆದರೆ, ಈ ಪೈಕಿ ಕಾರ್ಲಿಟೊ ವೇಲ್ ಮೃತಪಟ್ಟಿದ್ದ. ಅವರ ಜೀವನಗಾಥೆಯು ‘The Man Who Fell from the Sky’ ಸಾಕ್ಷ್ಯಚಿತ್ರದಲ್ಲಿ ದಾಖಲಾಗಿದೆ.
ಸೌಜನ್ಯ: ndtv.com







