ಸೆಪ್ಟೆಂಬರ್ 9ರಂದು ಉಪ ರಾಷ್ಟ್ರಪತಿ ಚುನಾವಣೆ
ಆಗಸ್ಟ್ 21 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

ಸಾಂದರ್ಭಿಕ ಚಿತ್ರ (credit: businesstoday.in)
ಹೊಸದಿಲ್ಲಿ: ಸೆಪ್ಟೆಂಬರ್ 9ರಂದು ಉಪ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಆಗಸ್ಟ್ 21 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಎಂದು ಶುಕ್ರವಾರ ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದೆ.
2022ರಿಂದ ಉಪ ರಾಷ್ಟ್ರಪತಿಯಾಗಿದ್ದ ಜಗದೀಪ್ ಧನಕರ್ ಅವರು ಮುಂಗಾರು ಸಂಸತ್ ಅಧಿವೇಶನದ ಮೊದಲ ದಿನ ಮುಕ್ತಾಯಗೊಂಡ ನಂತರ, ರಾಜ್ಯಸಭಾ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಪ್ರಕಟಿಸಿದ್ದರಿಂದ, ಉಪ ರಾಷ್ಟ್ರಪತಿ ಹುದ್ದೆಗೆ ಮಧ್ಯಂತರ ಚುನಾವಣೆ ಘೋಷಣೆಯಾಗಿದೆ.
ಚುನಾವಣಾ ವೇಳಾಪಟ್ಟಿಯ ಪ್ರಕಾರ, ಆಗಸ್ಟ್ 21 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಸೆಪ್ಟೆಂಬರ್ 9ರಂದು ಚುನಾವಣೆ ನಡೆಯಲಿದೆ. ಅದೇ ದಿನ ಮತಪತ್ರಗಳ ಎಣಿಕೆ ಕಾರ್ಯ ಕೂಡಾ ನಡೆಯಲಿದೆ.
ಜುಲೈ 22, 2025ರಂದು ಹೊರಡಿಸಲಾದ ಅಧಿಸೂಚನೆಯ ಮೂಲಕ ಉಪ ರಾಷ್ಟ್ರಪತಿ ಹುದ್ದೆ ಖಾಲಿಯಾಗಿದೆ ಎಂಬುದನ್ನು ಗೃಹ ವ್ಯವಹಾರಗಳ ಸಚಿವಾಲಯ ದೃಢಪಡಿಸಿತ್ತು. ಕಾನೂನಿನ ಪ್ರಕಾರ, ಉಪ ರಾಷ್ಟ್ರಪತಿ ಹುದ್ದೆಯ ಚುನಾವಣೆಯನ್ನು ಎಷ್ಟು ಶೀಘ್ರ ಸಾಧ್ಯವೊ ಅಷ್ಟು ಶೀಘ್ರವಾಗಿ ನಡೆಸಬೇಕಾಗುತ್ತದೆ. ಈ ಚುನಾವಣೆಯಲ್ಲಿ ಆಯ್ಕೆಯಾಗುವವರು ತಾವು ಹುದ್ದೆಯನ್ನು ಅಲಂಕರಿಸಿದ ದಿನದಿಂದ ಐದು ವರ್ಷಗಳ ಪೂರ್ಣಾವಧಿಗೆ ಉಪ ರಾಷ್ಟ್ರಪತಿಗಳಾಗಿರುತ್ತಾರೆ.
ಇದಕ್ಕೂ ಮುನ್ನ, ಜಗದೀಪ್ ಧನಕರ್ ಅವರು ದಿಢೀರನೆ ತಮ್ಮ ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರಿಂದ, ರಾಜಕೀಯ ವಲಯದಲ್ಲಿ ಅಚ್ಚರಿಯನ್ನುಂಟು ಮಾಡಿತ್ತು. ಅವರ ರಾಜೀನಾಮೆಯ ಕುರಿತು ಹಲವಾರು ವದಂತಿಗಳು ಹರಡಿದ್ದವು.







