ಹಾರಂಗಿ ಜಲಾಶಯದಿಂದ 1 ಸಾವಿರ ಕ್ಯುಸೆಕ್ ನೀರು ಬಿಡುಗಡೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯ ಸಂಪೂರ್ಣ ಭರ್ತಿಯಾಗುವ ಮೊದಲೇ ಪ್ರವಾಹ ಮುಂಜಾಗೃತಾ ಕ್ರಮವಾಗಿ ಸಂಜೆ ವೇಳೆ 1 ಸಾವಿರ ಕ್ಯುಸೆಕ್ ಪ್ರಮಾಣದ ನೀರನ್ನು ನದಿ ಪಾತ್ರಕ್ಕೆ ಬಿಡುಗಡೆ ಮಾಡಲಾಗಿದೆ.
ಕ್ರೆಸ್ಟ್ ಗೇಟ್ ತೆರೆಯುವ ವಿದ್ಯುತ್ ಚಾಲಿತ ಯಂತ್ರದ ಗುಂಡಿ ಒತ್ತುವ ಮೂಲಕ ನೀರನ್ನು ಬಿಡುಗಡೆ ಮಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ, ಮುಂದಿನ ಮಳೆಯ ಮುನ್ಸೂಚನೆ, ಒಳ ಹರಿವಿನ ಪ್ರಮಾಣ, ಪ್ರಸ್ತುತ ನದಿಗೆ ಹರಿ ಬಿಡಲಾಗುತ್ತಿರುವ ನೀರಿನ ಪ್ರಮಾಣ ಮತ್ತಿತ್ತರ ವಿಚಾರಗಳ ಕುರಿತು ಹಾರಂಗಿ ಜಲಾಶಯದ ಅಧಿಕಾರಿಗಳು ಮತ್ತು ಇಂಜಿನಿಯರ್‍ಗಳಿಂದ ಮಾಹಿತಿ ಪಡೆದರು.
ಉತ್ತಮ ಮಳೆಯಿಂದ ಕಾವೇರಿ ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ಹರಿಸುವ ನೀರಿನಿಂದ ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಶಾಸಕರು ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಲಾಶಯದ 4 ಕ್ರೆಸ್ಟ್ ಗೇಟ್‍ಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಬಳಿಕ ಕ್ರೆಸ್ಟ್ ಗೇಟ್ ತೆರೆಯುವ ವಿದ್ಯುತ್ ಚಾಲಿತ ಯಂತ್ರದ ಗುಂಡಿ ಒತ್ತುವ ಮೂಲಕ ಶಾಸಕ ಡಾ.ಮಂತರ್ ಗೌಡ ನದಿ ಪಾತ್ರಕ್ಕೆ ನೀರನ್ನು ಬಿಡುಗಡೆ ಮಾಡಿದರು.
ಮುನ್ನೆಚ್ಚರಿಕೆ ವಹಿಸಿ:
ಹಾರಂಗಿ ಜಲಾನಯನ ಪ್ರದೇಶಗಳಾದ ಮಡಿಕೇರಿ ನಗರ, ಗಾಳಿಬೀಡು, ವಣಚಲು, ಕಾಲೂರು, ಸೂರ್ಲಬ್ಬಿ ಮತ್ತಿತ್ತರ ಗ್ರಾಮಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಹಾರಂಗಿ ಜಲಾಶಯದ ನೀರಿನ ಮೂಲಗಳಾದ ಹಟ್ಟಿಹೊಳೆ ಮತ್ತು ಮಾದಾಪುರ ಹೊಳೆಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ. ಈ ನದಿಗಳ ನೀರು ಹಾರಂಗಿ ಹಿನ್ನೀರಿಗೆ ಸೇರುತ್ತಿದ್ದು, ಜಲಾಶಯದ ಒಳಹರಿವಿನ ಪ್ರಮಾಣ ಸಹಜವಾಗಿಯೇ ಏರಿಕೆಯಾಗುತ್ತಿದೆ. ಮಾತ್ರವಲ್ಲದೇ, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದೆ. ಇದರಿಂದಾಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಲಕ್ಷಣಗಳಿವೆ. ಜಲಾಶಯ ಶೀಘ್ರವೇ ಗರಿಷ್ಠ ಮಟ್ಟ ತಲುಪುವುದರಿಂದ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಾರಂಗಿ ಮತ್ತು ಕಾವೇರಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡು ದಂಡೆಯಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜನಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾರಂಗಿ ಪುನರ್ವಸತಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ ಅವರು ಕೋರಿದ್ದಾರೆ.
ಈ ಸಂದರ್ಭ ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಸದಸ್ಯ ಕಿರಣ್ ಕುಮಾರ್, ಕುಶಾಲನಗರ ಪುರಸಭಾ ನಾಮ ನಿರ್ದೇಶಿತ ಸದಸ್ಯ ಶಿವ ಶಂಕರ್, ಹರೀಶ್, ಕೂಡಿಗೆ ಗ್ರಾ.ಪಂ ಸದಸ್ಯ ಟಿ.ಪಿ ಹಮೀದ್, ತೊರೆನೂರು ನೀರು ಬಳಕೆದಾರರ ಸಂಘದ ಅಧ್ಯಕ್ಷ ಪಾಂಡುರಂಗ, ಕಾವೇರಿ ನೀರಾವರಿ ನಿಗಮದ ಮೇಲ್ವಿಚಾರಕ ಕೆ.ಕೆ.ರಘುಪತಿ, ಹಾರಂಗಿ ಜಲಾಶಯದ ಕಾರ್ಯಪಾಲಕ ಅಭಿಯಂತರ ಐ.ಕೆ.ಪುಟ್ಟಸ್ವಾಮಿ, ಕಿರಿಯ ಅಭಿಯಂತರ ಸಿದ್ದರಾಜು ಸೌಮ್ಯ, ಪ್ರಮುಖರಾದ ಕೃಷ್ಣೇಗೌಡ, ಶಿವಕುಮಾರ್, ಆದಂ, ಚಂದ್ರಶೇಖರ್, ಚೇತನ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
ಹಾರಂಗಿ ಜಲಾಶಯ ವಿವರ:
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಪ್ರಸ್ತುತ ಜಲಾಶಯದಲ್ಲಿ 2848.76 ಅಡಿಗಳಷ್ಟು ನೀರಿನ ಸಂಗ್ರಹವಿದೆ. ಸೋಮವಾರ ಬೆಳಗಿನ 8.30ರ ದಾಖಲೆಗಳ ಪ್ರಕಾರ ಜಲಾಶಯಕ್ಕೆ 2394 ಕ್ಯುಸೆಕ್ ನೀರಿನ ಒಳಹರಿವು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನದಿಗೆ 1 ಸಾವಿರ ಕ್ಯುಸೆಕ್ ನೀರನ್ನು ಹರಿಯ ಬಿಡಲಾಗಿದ್ದರೆ, ಕಳೆದ ವರ್ಷ ಇದೇ ದಿನ ನದಿಗೆ 50 ಕ್ಯುಸೆಕ್ ಮತ್ತು ನಾಲೆಗೆ 20 ಕ್ಯುಸೆಕ್ ನೀರನ್ನು ಹರಿಸಲಾಗಿತ್ತು.







