ಒಂದು ಗೋಡೆಗೆ ನಾಲ್ಕು ಲೀಟರ್ ಬಣ್ಣ ಹಚ್ಚಲು 233 ಕಾರ್ಮಿಕರು!

ಭೋಪಾಲ್: ಮಧ್ಯಪ್ರದೇಶದ ಶಾಡೋಲ್ ಜಿಲ್ಲೆಯ ಸಕಂಡಿ ಎಂಬ ಗ್ರಾಮದ ಸರ್ಕಾರಿ ಶಾಲೆಯ ಒಂದು ಗೋಡೆಗೆ ಕೇವಲ ನಾಲ್ಕು ಲೀಟರ್ ಬಣ್ಣ ಬಳಿಯಲು 168 ಮಂದಿ ಕಾರ್ಮಿಕರು ಮತ್ತು 65 ಮೇಸ್ತ್ರಿಗಳನ್ನು ಬಳಸಿಕೊಂಡ ವಿಚಿತ್ರ- ಸ್ವಾರಸ್ಯಕರ ಪ್ರಕರಣ ಬೆಳಕಿಗೆ ಬಂದಿದೆ.
ಬ್ಯೋಹರಿ ಅಸೆಂಬ್ಲಿಯ ಈ ಬಿಲ್ ಶನಿವಾರ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಅಗಿದ್ದು, ಕೇವಲ ನಾಲ್ಕು ಲೀಟರ್ ಬಣ್ಣ ಹಚ್ಚಲು 1.07 ಲಕ್ಷ ರುಪಾಯಿಗಳನ್ನು ವೆಚ್ಚ ಮಾಡಿರುವ ಹಗರಣವನ್ನು ಬೆಳಕಿಗೆ ತಂದಿದೆ. ನಿಪನಿಯ ಗ್ರಾಮದ ಇನ್ನೊಂದು ಶಾಲೆಯಲ್ಲಿ 20 ಲೀಟರ್ ಪೆಯಿಂಟ್ ಮಾಡಲು 2.3 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ.
ಸಕಂಡಿ ಶಾಲೆಯ ಒಂದು ಗೋಡೆಯ ಪೈಂಟಿಂಗ್ಗೆ 168 ಕಾರ್ಮಿಕರು ಮತ್ತು 65 ಮೇಸ್ತ್ರಿಗಳು ಶ್ರಮ ವಹಿಸಿದ್ದರೆ, ನಿಪಾನಿಯ ಶಾಲೆಯ 10 ಕಿಟಕಿ ಮತ್ತು ನಾಲ್ಕು ಬಾಗಿಲುಗಳಿಗೆ ಹಣ್ಣ ಬಳಿಯಲು 275 ಕಾರ್ಮಿಕರು ಮತ್ತು 150 ಮೇಸ್ತ್ರಿಗಳು ಕೆಲಸ ಮಾಡಿದ್ದಾರೆ.
ಮತ್ತೂ ಸ್ವಾರಸ್ಯಕರವೆಂದರೆ ಸುಧಾರಕ್ ಕನ್ಸ್ಟ್ರಕ್ಷನ್ ಎಂಬ ಸಂಸ್ಥೆ ಈ ಕಾಮಗಾರಿ ನಿರ್ವಹಿಸಿದ್ದು, 2025ರ ಮೇ 5ರಂದು ಈ ಬಿಲ್ ಸೃಷ್ಟಿಸಿದೆ. ಆದರೆ ಬಿಲ್ ನೀಡುವ ಒಂದು ತಿಂಗಳು ಮೊದಲು ಅಂದರೆ ಏಪ್ರಿಲ್ 4ರಂದು ಇದನ್ನು ನಿಪನಿಯಾ ಶಾಲೆಯ ಪ್ರಾಚಾರ್ಯರು ದೃಢೀಕರಿಸಿದ್ದಾರೆ.
ಬಿಲ್ ಜತೆಗೆ ಕಾನೂನುಬದ್ಧವಾಗಿ ಬಣ್ಣ ಹಚ್ಚುವ ಮೊದಲು ಹಾಗೂ ನಂತರ ತೆಗೆದ ಛಾಯಾಚಿತ್ರ ಇರಬೇಕು. ಆದರೆ ಯಾವುದೇ ಫೋಟೊಗಳು ಇಲ್ಲದೆಯೂ ಬಿಲ್ ಅನುಮೋದನೆ ಪಡೆದಿದೆ. ಈ ವೈರಲ್ ಬಿಲ್ಗಳ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ವಾಸ್ತವಾಂಶಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಫೂಲ್ಸಿಂಗ್ ಮಾರ್ಪಾಚಿ ಹೇಳಿದ್ದಾರೆ.