ಮೇಘಾಲಯ ಪ್ರವೇಶಿಸಲು ಯತ್ನಿಸಿದ ಅಸ್ಸಾಂನ ಪ್ರವಾಸಿಗರನ್ನು ತಡೆದ 10 ಮಂದಿಯ ಬಂಧನ

ಸಾಂದರ್ಭಿಕ ಚಿತ್ರ | PC : PTI
ಶಿಲ್ಲಾಂಗ್: ಮೇಘಾಲಯ ಪ್ರವೇಶಿಸಲು ಯತ್ನಿಸಿದ ಅಸ್ಸಾಂ ಪ್ರವಾಸಿಗರನ್ನು ತಡೆದ ಆರೋಪದಲ್ಲಿ ಕನಿಷ್ಠ 10 ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಈ ಘಟನೆಯು ಉದ್ಯೋಗ ಪರವಾನಗಿ ಪರಿಶೀಲನೆಯ ನೆಪದಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ವಿವಿಧ ಸಂಘಟನೆಗಳ ಮೇಲೆ ನಾಲ್ಕು FIR ದಾಖಲಾದ ನಂತರ ನಡೆದಿದೆ.
ಶುಕ್ರವಾರ ರಾಜ್ಯ ರಾಜಧಾನಿ ಶಿಲ್ಲಾಂಗ್ ನಿಂದ ಸುಮಾರು 20 ಕಿಮೀ ದೂರ ಇರುವ ಉಮ್ಟಿಂಗ್ನ ರ್ ಬಳಿ ಹೈನ್ಯೂಟ್ರೆಪ್ ನ್ಯಾಷನಲ್ ಯೂತ್ ಫೆಡರೇಷನ್ ಸಂಘಟನೆಯ ಸದಸ್ಯರು ತಪಾಸಣಾ ಠಾಣೆಯನ್ನು ನಿರ್ಮಿಸಿದ್ದಾರೆ ಎಂದು ಹೇಳಲಾಗಿದೆ. ಅವರು ಅಸ್ಸಾಂ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳು ಮೇಘಾಲಯದ ಜನಪ್ರಿಯ ಪ್ರವಾಸಿ ತಾಣಗಳಾದ ಸೋಹ್ರಾ ಹಾಗೂ ಡೌಕಿಗೆ ತೆರಳದಂತೆ ಮಾರ್ಗಮಧ್ಯದಲ್ಲಿ ತಡೆದರು ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಖಾಸಿ ಹಿಲ್ಸ್ ಪೊಲೀಸ್ ವರಿಷ್ಠಾಧಿಕಾರಿ ಸಿಲ್ವೆಸ್ಟರ್ ನಂಗ್ಟ್ ನ್ಗರ್, ಪ್ರವಾಸಿಗರನ್ನು ಅನಧಿಕೃತವಾಗಿ ತಡೆ ಹಿಡಿಯಲಾಗುತ್ತಿದೆ ಎಂಬ ಮಾಹಿತಿ ಶುಕ್ರವಾರ ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ನಮಗೆ ಬಂದಿತು ಎಂದು ಹೇಳಿದ್ದಾರೆ.
ಅಸ್ಸಾಂ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳನ್ನು ವಾಪಸ್ಸು ಕಳಿಸುತ್ತಿದ್ದ 10 ಮಂದಿಯನ್ನು ಬಂಧಿಸಲಾಯಿತು ಎಂದು ನಂಗ್ಟ್ ನ್ಗರ್ ತಿಳಿಸಿದ್ದಾರೆ.
ಈ ನಿರ್ಬಂಧದಿಂದ ಈ ಪ್ರಾಂತ್ಯದ ಪ್ರವಾಸೋದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ಹೇಳಲಾಗಿದೆ.







