ಮಕ್ಕಳಿಗಿಲ್ಲ ಉದ್ಯೋಗದ ಚಿಂತೆ; ಹೆತ್ತವರಿಗಿದೆ ಖರ್ಚು ವೆಚ್ಚದ ಆತಂಕ!

ಸಾಂದರ್ಭಿಕ ಚಿತ್ರ | Photo Credit : freepik
ಎಐ ಉದ್ಯೋಗ ಕಸಿತ ಮತ್ತು ರೂಪಾಯಿ ಮೌಲ್ಯ ಕುಸಿತದ ಸಂದರ್ಭದಲ್ಲಿ ವಿದೇಶದಲ್ಲಿ ಶಿಕ್ಷಣ ಪೂರೈಸಲು ಯೋಜಿಸುತ್ತಿರುವ ವಿದ್ಯಾರ್ಥಿಗಳ ಹೆತ್ತವರು ಶಿಕ್ಷಣದ ದುಬಾರಿ ವೆಚ್ಚವನ್ನು ನಿಭಾಯಿಸುವ ಜೊತೆಗೆ ವೃತ್ತಿಪರ ಆಯ್ಕೆಯನ್ನು ಹೇಗೆ ಮಾಡಿಕೊಳ್ಳುತ್ತಾರೆ?
ಕೃತಕ ಬುದ್ಧಿಮತ್ತೆ ಅಥವಾ ಎಐ ಅನೇಕ ಉದ್ಯಮಗಳನ್ನು ಪುನರ್ರೂಪಿಸುತ್ತಿರುವ ಸಂದರ್ಭದಲ್ಲಿ ರೂಪಾಯಿ ಮೌಲ್ಯ ಕುಸಿಯುತ್ತಿರುವಾಗ ಹೊಸದಾಗಿ ಉದ್ಯೋಗ ಜಗತ್ತನ್ನು ಪ್ರವೇಶಿಸುತ್ತಿರುವವರು ಮತ್ತು ಅವರ ಹೆತ್ತವರ ಆತಂಕವೇನು? ವಿದೇಶದಲ್ಲಿ ಶಿಕ್ಷಣ ಪೂರೈಸಲು ಯೋಜಿಸುತ್ತಿರುವ ವಿದ್ಯಾರ್ಥಿಗಳ ಹೆತ್ತವರು ಶಿಕ್ಷಣದ ದುಬಾರಿ ವೆಚ್ಚವನ್ನು ನಿಭಾಯಿಸುವ ಜೊತೆಗೆ ವೃತ್ತಿಪರ ಆಯ್ಕೆಯನ್ನು ಹೇಗೆ ಮಾಡಿಕೊಳ್ಳುತ್ತಾರೆ?
ಹುಬ್ಬಳ್ಳಿ ನಿವಾಸಿಯಾಗಿರುವ ಸಂಗಮೇಶ್ ಮೆಣಸಿನಕಾಯಿ ಅವರ ಮಗಳು ಇದೀಗ ಮೊದಲನೇ ವರ್ಷ ಪಿಯುಸಿ ಓದುತ್ತಿದ್ದಾರೆ. ಆದರೆ ಮುಂದಿನ ವಿದ್ಯಾಭ್ಯಾಸಕ್ಕೆ ಮಗಳನ್ನು ವಿದೇಶಕ್ಕೆ ಕಳುಹಿಸುವ ಯೋಜನೆ ಹೊಂದಿದ್ದಾರೆ. “ಮಗಳು ಎಂಜಿನಿಯರಿಂಗ್ ಓದುವ ಉದ್ದೇಶ ಹೊಂದಿದ್ದಾರೆ. ಜಪಾನ್ ಅಥವಾ ಜರ್ಮನಿಗೆ ಕಳುಹಿಸಬೇಕೆನ್ನುವ ಯೋಜನೆಯಿದೆ. ಆ ಎರಡು ದೇಶಗಳು ಕಲಿಕೆ/ಗಳಿಕೆ ಎರಡನ್ನೂ ಪ್ರೋತ್ಸಾಹಿಸುವ ದೇಶಗಳಿಗೆ ಕಳುಹಿಸಲು ನಿರ್ಧರಿಸಿದ್ದೇವೆ. ಆದರೆ ಅತಿಯಾದ ಖರ್ಚು-ವೆಚ್ಚಗಳಾಗುವುದಾದಲ್ಲಿ ಕಳುಹಿಸುವುದಿಲ್ಲ. ಭಾರತದಲ್ಲಿ ಓದಿಗೆ ಎಷ್ಟು ಖರ್ಚಾಗುತ್ತದೆಯೋ ಅಷ್ಟೇ ಖರ್ಚಾಗುವುದಾದಲ್ಲಿ ಕಳುಹಿಸುತ್ತೇವೆ” ಎಂದು ಅಭಿಪ್ರಾಯಪಟ್ಟರು.
ಎಐ ಉದ್ಯೋಗ ಕಡಿತ ಮಾಡುವ ಬಗ್ಗೆ ಸಂಗಮೇಶ್ ಅವರಿಗೆ ಚಿಂತೆಯಿಲ್ಲ “ಯಾವ ಕೋರ್ಸ್ ಮಾಡಿದರೆ ಉತ್ತಮ ಎನ್ನುವ ನಿರ್ಧಾರವನ್ನು ಮಗಳಿಗೇ ಬಿಟ್ಟಿದ್ದೇವೆ. ಆಕೆ ಪ್ರಸ್ತುತ ವೃತ್ತಿಪರ- ಉದ್ಯೋಗ ವಿಚಾರದಲ್ಲಿ ಸಾಕಷ್ಟು ಮಾಹಿತಿ ಹೊಂದಿದ್ದಾಳೆ. ಯಾವ ಉದ್ಯೋಗ ಉತ್ತಮ ಎನ್ನುವ ನಿರ್ಧಾರವನ್ನು ಆಕೆಗೇ ಬಿಟ್ಟಿದ್ದೇವೆ” ಎನ್ನುತ್ತಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಅದ್ಯಾಪಕಿಯಾಗಿರುವ ಶೈಲಶ್ರೀ ಅವರ ಪುತ್ರ ಜಾರ್ಜಿಯದಲ್ಲಿ ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಅವರ ಪ್ರಕಾರ, “ರೂಪಾಯಿ ಮೌಲ್ಯದಿಂದ ಏರುತ್ತಿರುವ ವೆಚ್ಚದ ಬಗ್ಗೆ ಕಳವಳವಿದೆ. ಇದೀಗ ಸ್ಥಿರವಾಗಿದ್ದ (ಮೊದಲು ಹೇಳಿದ್ದ) ಶುಲ್ಕ, ರೂಪಾಯಿ ಮೌಲ್ಯ ಕುಸಿತವಾದ ನಂತರ ಹತ್ತಿಪ್ಪತ್ತು ಸಾವಿರ ಹೆಚ್ಚಾಗಿದೆ. ವಿಭಿನ್ನ ವಿಶ್ವವಿದ್ಯಾಲಯಗಳ ನಿಯಮಗಳನ್ನು ಅನುಸರಿಸಿ ವೆಚ್ಚ ಏರಿಕೆ ಇರುತ್ತದೆ. ನನ್ನ ಮಗ ಕೆನ್ವಾಕರ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾನೆ. ಈ ಸಂಸ್ಥೆಗೆ ಅಮೆರಿಕದ ಜೊತೆಗೆ ಒಪ್ಪಂದವಿದೆ. ಹೀಗಾಗಿ ಅಮೆರಿಕದಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಬಹುದು. ಮಾತ್ರವಲ್ಲದೆ, ಇಲ್ಲಿ ಪದವಿ ಮುಗಿದ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಸ್ಕಾಲರ್ಶಿಪ್ ಕೂಡ ಕೊಡುತ್ತಾರೆ. ಉಳಿದಂತೆ ನಮ್ಮ ಮಕ್ಕಳು ಹೇಗೆ ವಿದ್ಯಾಭ್ಯಾಸ ಮಾಡುತ್ತಾರೆ ಎನ್ನುವುದನ್ನು ಅನುಸರಿಸಿದೆ.”
ಮಂಗಳೂರಿನ ನಿವಾಸಿ ರಾಜೇಶ್ವರಿಯವರು ಇತ್ತೀಚೆಗೆ ತಮ್ಮ ಮಗನನ್ನು ಜರ್ಮನಿಗೆ ಕಳುಹಿಸಿದ್ದಾರೆ. ಅವರ ಮಗ ಜರ್ಮನಿಯಲ್ಲಿ ಇಂಟರ್ನ್ಯಾಷನಲ್ ಮ್ಯಾನೇಜ್ಮೆಂಟ್ ಕಲಿಕೆಯಲ್ಲಿ ತೊಡಗಿದ್ದಾರೆ. ಅವರ ಪ್ರಕಾರ ಜರ್ಮನಿಯಲ್ಲಿ ಓದುವ ಸಂಪೂರ್ಣ ನಿರ್ಧಾರ ಮಗನದ್ದು! “ನಮಗೆ ಆತಂಕವಿದೆ. ಆದರೆ ಮಗ ಇಷ್ಟಪಟ್ಟಿದ್ದಾನೆ ಎಂದು ಕಳುಹಿಸಿದ್ದೇವೆ. ಸಾಲ ತೆಗೆಯಲು ನೆರವಾಗಿದ್ದು ಹೊರತುಪಡಿಸಿದರೆ ಎಲ್ಲಾ ನಿರ್ಧಾರ ಮಗನದ್ದೇ ಆಗಿದೆ” ಎಂದು ಅವರು ಹೇಳಿದರು.
ಜರ್ಮನಿಯಲ್ಲಿ ಸ್ನಾತಕೋತ್ತರ ಓದು ಉಚಿತವಾಗಿ ಮಾಡುವ ಅವಕಾಶವಿದೆ. ಮೊದಲ ವರ್ಷದ ಓದಿಗೆ ಹಣ ಕಟ್ಟಿದರೆ ನಂತರ ಅಲ್ಲಿ ಕಲಿಕೆ/ಗಳಿಕೆಗೆ ಅವಕಾಶವಿದೆ. ಉಳಿದ ಎಲ್ಲಾ ಖರ್ಚು ಉಚಿತವಾಗಿ ಹೋಗುತ್ತದೆ. ಹೀಗಾಗಿ ಭಾರತೀಯರು ಸ್ನಾತಕೋತ್ತರ ಓದಿಗೆ ಜರ್ಮನಿಗೆ ಹೋಗಲು ಹೆಚ್ಚು ಬಯಸುತ್ತಾರೆ.
ಮೂಲತಃ ಮಂಗಳೂರಿನವರಾಗಿದ್ದು ಕಳೆದೊಂದು ದಶಕದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಗರ್ಟ್ಯೂಡ್ ಅವರ ಮಗಳು ಆಸ್ಟ್ರೇಲಿಯದಲ್ಲಿ ಇತ್ತೀಚೆಗಷ್ಟೇ ಓದು ಮುಗಿಸಿದ್ದಾರೆ. ಮನಶ್ಯಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ಅವರು ಸಲಹೆಗಾರರಾಗಿ ಕೆಲಸ ಮಾಡುತ್ತಾರೆ. “ವಿದೇಶದಲ್ಲಿ ದುಬಾರಿ ವಿದ್ಯಾಭ್ಯಾಸ ಮುಗಿಸಿದ ನಂತರದ ಭವಿಷ್ಯ ಏನು ಎನ್ನುವ ಚಿಂತೆ ನಮಗಿದೆ. ಆದರೆ ಮಕ್ಕಳಿಗೆ ಆ ಚಿಂತೆಯಿಲ್ಲ. ಜನರು ಎಚ್ಚೆತ್ತುಕೊಳ್ಳಬೇಕು. ಎಐನಿಂದ ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗಕ್ಕೆ ತೊಂದರೆ ಬಾರದು ಎಂದು ಹೇಳುತ್ತಾರೆ. ಆದರೆ ನಾಳೆ ಉದ್ಯೋಗ ನಷ್ಟವಾದರೆ ಏನು ಮಾಡುತ್ತಾರೆ ಎನ್ನುವ ಆತಂಕ ನನ್ನದು” ಎಂದು ಅಭಿಪ್ರಾಯಪಟ್ಟರು.
ಈಗಿನ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಸ್ವಯಂ ನಿರ್ಧಾರ ಕೈಗೊಳ್ಳಲು ಬಯಸುತ್ತಾರೆ. ಅದು ವಿದೇಶಿ ಶಿಕ್ಷಣವಿರಲಿ ಅಥವಾ ವಿಷಯದ ಆಯ್ಕೆಯೇ ಇರಲಿ. ತಮ್ಮ ಭವಿಷ್ಯವನ್ನು ಸ್ವತಃ ನಿರ್ಧರಿಸುವಲ್ಲಿ ಜೆನ್ ಝೀ ಪ್ರಸಿದ್ಧರು. ಸಂಗಮೇಶ್ ಮಗಳು, ಗರ್ಟ್ಯೂಡ್ ಮಗಳು ಅಥವಾ ರಾಜೇಶ್ವರಿಯ ಮಗ ವಿದೇಶದಲ್ಲಿ ಶಿಕ್ಷಣ ಪಡೆಯುವ ಬಗ್ಗೆ ಸ್ವಯಂ ನಿರ್ಧರಿಸಿದ್ದಾರೆ. ಆದರೆ ಇಂತಹ ನಿರ್ಧಾರಗಳು ಪ್ರತಿ ಬಾರಿ ಸರಿಯಾಗಿರುತ್ತದೆಯೆ?
ಮಂಗಳೂರು ಮೂಲದ ಅನುವಾದಕಿ/ ಪತ್ರಕತರ್ತೆ ಫ್ಲೋರಿನ್ ಅವರು ಮಗ ಆಕ್ಚುವರಲ್ ಸೈನ್ಸ್ (ಅಂಕಿ-ಅಂಶಗಳಿಗೆ ಸಂಬಂಧಿಸಿ) ಸ್ನಾತಕೋತ್ತರ ಪದವಿ ಪಡೆದು ಇದೀಗ ಎಐ ಸಂಬಂಧಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. “ಅವರ ಪ್ರಕಾರ ಪರಿಣತಿ ಇದ್ದವರು ಬದಲಾಗುವ ತಂತ್ರಜ್ಞಾನಕ್ಕೆ ಸಮವಾಗಿ ಉದ್ಯೋಗವನ್ನು ಹುಡುಕಿಕೊಳ್ಳುತ್ತಾರೆ. ಎಐ ಉದ್ಯೋಗ ಕಸಿದುಕೊಳ್ಳುವುದು ನಿಜವಾದರೂ, ಪರ್ಯಾಯ ಉದ್ಯೋಗಗಳು ಸೃಷ್ಟಿಯಾಗಬಹುದು. ಹೀಗಾಗಿ ಮಗನ ಭವಿಷ್ಯದ ಬಗ್ಗೆ ಹೆಚ್ಚಿನ ಆತಂಕವಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.







