ಪ್ರವಾಹದಲ್ಲಿ ಪೋಷಕರನ್ನು ಕಳೆದುಕೊಂಡ 10 ತಿಂಗಳ ಶಿಶುವನ್ನು ʼರಾಜ್ಯದ ಮಗುʼ ಎಂದು ಘೋಷಿಸಿದ ಹಿಮಾಚಲ ಪ್ರದೇಶ ಸರಕಾರ

Photo credit: NDTV
ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥಳಾದ 10 ತಿಂಗಳ ಮಗು ನೀತಿಕಾಳನ್ನು ʼರಾಜ್ಯದ ಮಗುʼ ಎಂದು ಘೋಷಿಸಲಾಗಿದೆ. ಮಗುವಿನ ಪಾಲನೆ ಮತ್ತು ಶಿಕ್ಷಣದ ವೆಚ್ಚವನ್ನು ನೋಡಿಕೊಳ್ಳುವುದಾಗಿ ಸರಕಾರ ಹೇಳಿದೆ.
ಜೂನ್ 30 ಮತ್ತು ಜುಲೈ 1ರ ಮಧ್ಯರಾತ್ರಿ ತಲ್ವಾರಾ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿದ ಬಳಿಕ ಪ್ರವಾಹದಲ್ಲಿ ಮಗು ತನ್ನ ಪೋಷಕರು ಮತ್ತು ಅಜ್ಜಿಯನ್ನು ಕಳೆದುಕೊಂಡಿದೆ. ಮಗುವಿನ ತಂದೆ ರಮೇಶ್ (31) ಮೃತಪಟ್ಟಿದ್ದು, ತಾಯಿ ರಾಧಾ ದೇವಿ (24) ಮತ್ತು ಅಜ್ಜಿ ಪೂರ್ಣು ದೇವಿ (59) ನಾಪತ್ತೆಯಾಗಿದ್ದಾರೆ.
ನೀತಿಕಾ ಅವರನ್ನು ಹಿಮಾಚಲ ಪ್ರದೇಶ ಸರಕಾರದ ಮುಖ್ಯಮಂತ್ರಿ ಸುಖ-ಆಶ್ರಯ ಯೋಜನೆಯಡಿ ʼರಾಜ್ಯದ ಮಗುʼ ಎಂದು ಘೋಷಿಸಲಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಕಂದಾಯ ಸಚಿವ ಜಗತ್ ಸಿಂಗ್ ನೇಗಿ, ಪುಟ್ಟ ಬಾಲಕಿಯ ಪಾಲನೆ, ಶಿಕ್ಷಣ ಮತ್ತು ಭವಿಷ್ಯದ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಸರಕಾರ ವಹಿಸಿಕೊಳ್ಳುತ್ತಿದೆ. ಈ ಬಾಲಕಿ ಭವಿಷ್ಯದಲ್ಲಿ ವೈದ್ಯೆ, ಎಂಜಿನಿಯರ್, ಅಧಿಕಾರಿ ಅಥವಾ ಏನೇ ಆಗಲು ಬಯಸಿದರೂ ಎಲ್ಲಾ ವೆಚ್ಚಗಳನ್ನು ಸರಕಾರ ಭರಿಸಲಿದೆ ಎಂದು ಹೇಳಿದ್ದಾರೆ.







