LPG ಪೂರೈಕೆ, ವಿತರಣೆಗೆ ಕೇಂದ್ರ ಸರಕಾರದ ನಿಯಂತ್ರಣ; ಮನೆ,ವಾಹನಗಳಿಗೆ LPG ಪೂರೈಕೆ ಶೇ.100ರಷ್ಟು ಗ್ಯಾರಂಟಿ

Photo-ANI
ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಭುಗಿಲೆದ್ದ ಬಳಿಕ ಜಾಗತಿಕ ಮಟ್ಟದಲ್ಲಿ ತೈಲ ಹಾಗೂ ನೈಸರ್ಗಿಕ ಅನಿಲ ಸಾಗಾಟದಲ್ಲಿ ವ್ಯತ್ಯಯವುಂಟಾಗಿರುವ ಹಿನ್ನೆಲೆಯಲ್ಲಿ ಅವುಗಳ ಪೂರೈಕೆ ಹಾಗೂ ವಿತರಣೆಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿರುವುದಾಗಿ ಕೇಂದ್ರ ಸರಕಾರ ತಿಳಿಸಿದೆ. ಆದ್ಯತಾ ವಲಯಗಳಿಗೆ ನೈಸರ್ಗಿಕ ಅನಿಲವು ಅಬಾಧಿತವಾಗಿ ದೊರೆಯುವುದನ್ನು ಖಾತರಿಪಡಿಸಲು ಅತ್ಯವಶ್ಯಕ ಸಾಮಾಗ್ರಿಗಳ ಕಾಯ್ದೆಯ ನಿಯಮಗಳನ್ನು ಬಳಸಿಕೊಂಡಿರುವುದಾಗಿ ಹೇಳಿದೆ.
ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯವು ಈ ಬಗ್ಗೆ ಆದೇಶವೊಂದನ್ನು ಹೊರಡಿಸಿದ್ದು, ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ದ್ರವೀಕೃತ ನೈಸರ್ಗಿಕ ಇಂಧನದ ಸಾಗಾಟದ ಮೇಲೆ ಪರಿಣಾಮವುಂಟಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ನೈಸರ್ಗಿಕ ಅನಿಲವನ್ನು ಮನೆ, ಆಸ್ಪತ್ರೆ ಮತ್ತಿತರ ಅತ್ಯವಶ್ಯಕ ವಲಯಗಳಿಗೆ ಲಭ್ಯವಾಗುವಂತೆ ನೋಡಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದೆ.
ನೂತನ ರಾಷ್ಟ್ರೀಯ ನೈಸರ್ಗಿಕ ಅನಿಲ (ಪೂರೈಕೆ ನಿಯಂತ್ರಣ) ಆದೇಶ 2026ರ ಪ್ರಕಾರ ಮನೆಬಳಕೆಯ ಅಡುಗೆ ಅನಿಲ, ಸಾರಿಗೆಗೆ ಬಳಸಲಾಗುವ ಸಿಎನ್ಜಿ, ಎಲ್ಪಿಜಿ ಉತ್ಪಾದನೆ ಹಾಗೂ ಅತ್ಯಗತ್ಯ ಕೊಳವೆಮಾರ್ಗಗಳ ನಿರ್ವಹಣೆಗಾಗಿ ನೈಸರ್ಗಿಕ ಅನಿಲದ ಪೂರೈಕೆಗೆ ಆದ್ಯತೆ ನೀಡಲಾಗಿದೆ.
ಈ ಆದ್ಯತಾ ವಲಯಗಳಿಗೆ ಅವುಗಳ ಅವಶ್ಯಕತೆಯ ಶೇ.100ರಷ್ಟು ಅಡುಗೆ ಅನಿಲವನ್ನು ಪೂರೈಕೆ ಮಾಡಲಾಗುತ್ತದೆ. ರಸಗೊಬ್ಬರ ಕಾರ್ಖಾನೆಗಳನ್ನು ದ್ವಿತೀಯ ಆದ್ಯತಾ ವಲಯವಾಗಿ ಪರಿಗಣಿಸಲಾಗಿದ್ದು, ಅವುಗಳಿಗೆ ಸರಾಸರಿ ಅಗತ್ಯದ ಶೇ.70ರಷ್ಟು ಅಡುಗೆ ಅನಿಲವನ್ನು ಪೂರೈಕೆ ಮಾಡಲಾಗುವುದು. ಕೈಗಾರಿಕಾ ವಲಯದ ಗ್ರಾಹಕರು ಸರಾಸರಿ ಅವಶ್ಯಕತೆಯ ಶೇ.80ರಷ್ಟು ಅಡುಗೆ ಅನಿಲವನ್ನು ಪಡೆಯಲಿದ್ದಾರೆ.
ಈ ಆದ್ಯತಾ ವಲಯಗಳಿಗೆ ನೈಸರ್ಗಿಕ ಅನಿಲವು ನಿಯಮಿತ ಪೂರೈಕೆಯನ್ನು ಕಾಪಾಡಿಕೊಳ್ಳಲು, ಪೆಟ್ರೋಕೆಮಿಕಲ್ ಕಾರ್ಖಾನೆಗಳು ಹಾಗೂ ನಿರ್ದಿಷ್ಟ ವಿದ್ಯುತ್ ಸ್ಥಾವರಗಳು ಸೇರಿದಂತೆ ಕೆಳ ಆದ್ಯತಾ ವಲಯದ ಬಳಕೆದಾರರಿಗೆ ಪೂರೈಕೆಯಾಗುವ ನೈಸರ್ಗಿಕ ಅನಿಲವನ್ನು ತಿರುಗಿಸಲಾಗುವುದು.







