ಚಂದ್ರನ ಮೇಲೆ 100 ಮೀ. ಕ್ರಮಿಸಿದ ‘ಪ್ರಜ್ಞಾನ್’ ರೋವರ್
ಶೀಘ್ರವೇ ರೋವರ್, ಲ್ಯಾಂಡರ್ ‘ನಿದ್ದೆ’ಗೆ!

ಪ್ರಜ್ಞಾನ್ ಚಂದ್ರ | Photo: twitter \ @isro
ಹೊಸದಿಲ್ಲಿ: ಚಂದ್ರಯಾನ-3ರ ರೋವರ್ ಪ್ರಜ್ಞಾನ್ ಚಂದ್ರನ ನೆಲದಲ್ಲಿ 100 ಮೀಟರ್ಗೂ ಅಧಿಕ ದೂರವನ್ನು ಕ್ರಮಿಸಿದೆ ಹಾಗೂ ಇನ್ನಷ್ಟು ದೂರ ಸಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಶನಿವಾರ ಪ್ರಕಟಿಸಿದೆ.
‘‘ಪ್ರಜ್ಞಾನ್ 100... ಈ ನಡುವೆ, ಚಂದ್ರನ ಮೇಲಿರುವ ಪ್ರಜ್ಞಾನ್ ರೋವರ್ 100 ಮೀಟರ್ಗೂ ಅಧಿಕ ದೂರ ಕ್ರಮಿಸಿದೆ ಹಾಗೂ ಇನ್ನೂ ಮುಂದುವರಿಯುತ್ತಿದೆ’’ ಎಂದು ಇಸ್ರೋ ಟ್ವೀಟ್ ಮಾಡಿದೆ.
ಶೀಘ್ರವೇ ರೋವರ್, ಲ್ಯಾಂಡರ್ ‘ನಿದ್ದೆ’ಗೆ!
ಈ ನಡುವೆ, ರೋವರ್ ಮತ್ತು ವಿಕ್ರಮ್ ಲ್ಯಾಂಡರನ್ನು ‘‘ನಿದ್ದೆ’’ಗೆ ಜಾರುವಂತೆ ಮಾಡುವ ಪ್ರಕ್ರಿಯೆ ಒಂದೆರಡು ದಿನದಲ್ಲಿ ಆರಂಭವಾಗಲಿದೆ ಎಂದು ಇಸ್ರೊ ಮುಖ್ಯಸ್ಥ ಎಸ್. ಸೋಮನಾಥ್ ಹೇಳಿದ್ದಾರೆ.
‘‘14 ದಿನಗಳ ಚಂದ್ರನ ರಾತ್ರಿಯನ್ನು ರೋವರ್ ಮತ್ತು ಲ್ಯಾಂಡರ್ ತಾಳಿಕೊಳ್ಳಲು ಸಾಧ್ಯವಾಗುವಂತೆ ಅವುಗಳನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಇನ್ನೊಂದೆರಡು ದಿನಗಳಲ್ಲಿ ಆರಂಭಗೊಳ್ಳುತ್ತದೆ’’ ಎಂದು ಇಸ್ರೊ ಮುಖ್ಯಸ್ಥರು ಹೇಳಿದರು.





