ಭಾರತ ತುರ್ತುನಿಧಿಯಿಂದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ 10 ಸಾವಿರ ಕೋಟಿ ರೂ.ಮುಂಗಡ ಸಾಲ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವಾಲಯವು ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂನರೇಗಾ)ಗೆ 10 ಸಾವಿರ ಕೋಟಿ ರೂ.ಗಳನ್ನು ಭಾರತದ ತುರ್ತು ನಿಧಿಯಿಂದ ಸಾಲವಾಗಿ ನೀಡಿದೆಯೆಂದು ಲೋಕಸಭೆಗೆ ಮಂಗಳವಾರ ಕೇಂದ್ರ ಸರಕಾರ ತಿಳಿಸಿದೆ.
ನವೆಂಬರ್ 29ರವರೆಗೆ ಸಾಮಾಗ್ರಿಗಳು ಹಾಗೂ ಆಡಳಿತಾತ್ಮಕ ಸೌಲಭ್ಯಗಳಿಗಾಗಿ ಕೇಂದ್ರ ಸರಕಾರವು ಎಂನರೇಗಾಗೆ 66,629 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆಯೆಂದು ಕೇಂದ್ರ ಗ್ರಾಮೀಣ ಖಾತೆಯ ಸಹಾಯಕ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ತಿಳಿಸಿದ್ದಾರೆ.
2023-24ನೇ ಸಾಲಿನ ಬಜೆಟ್ ಅಂದಾಜು ಹಂತದಲ್ಲಿ ಎಂನರೇಗಾ ಯೋಜನೆಗೆ 60 ಸಾವಿರ ಕೋಟಿ ರೂ. ಅನುದಾನವನ್ನು ನಿಗದಿಪಡಿಸಲಾಗಿತ್ತು.
ಆನಂತರ ಭಾರತದ ತುರ್ತು ಆರ್ಥಿಕ ನಿಧಿಯಿಂದ 10 ಸಾವಿರ ಕೋಟಿ ರೂ. ಮುಂಗಡ ಸಾಲವನ್ನು ಒದಗಿಸಲಾಗಿತ್ತು.
ಈಗ ನಡೆಯುತ್ತಿರುವ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಎಂನರೇಗಾ ನಿಧಿಯಿಂದ 28 ಸಾವಿರ ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಲಾಗಿದೆಯೆಂದು ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ತಿಳಿಸಿದ್ದಾರೆ.