ಭದ್ರತಾ ಅನುಮತಿ ರದ್ದತಿಯಿಂದ 10,000 ಭಾರತೀಯ ಉದ್ಯೋಗಗಳಿಗೆ ಹೊಡೆತ: ದಿಲ್ಲಿ ಹೈಕೋರ್ಟ್ಗೆ ತಿಳಿಸಿದ ಟರ್ಕಿ ಕಂಪೆನಿ ಸೆಲೆಬಿ

Photo: celebiaviation.com
ಹೊಸದಿಲ್ಲಿ: ತನ್ನ ಭದ್ರತಾ ಅನುಮತಿಯನ್ನು ರದ್ದುಗೊಳಿಸುವ ಕೇಂದ್ರ ಸರಕಾರದ ನಿರ್ಧಾರವು ಭಾರತದಲ್ಲಿಯ ತನ್ನ 10,000ಕ್ಕೂ ಅಧಿಕ ಉದ್ಯೋಗಿಗಳ ಮೇಲೆ ಪರಿಣಾಮವನ್ನು ಬೀರಿದೆ ಎಂದು ಟರ್ಕಿ ಮೂಲದ ಏರ್ ಪೋರ್ಟ್ ಗ್ರೌಂಡ್ ಹ್ಯಾಂಡ್ಲಿಂಗ್ ಸಂಸ್ಥೆ ಸೆಲೆಬಿ ದಿಲ್ಲಿ ಉಚ್ಛ ನ್ಯಾಯಾಲಯಕ್ಕೆ ತಿಳಿಸಿದೆ.
ಬುಧವಾರ ವಿಚಾರಣೆ ಸಂದರ್ಭದಲ್ಲಿ ಕಂಪೆನಿಯ ಪರ ವಕೀಲ ಮುಕುಲ್ ರೋಹಟ್ಗಿಯವರು, ಸಂಸ್ಥೆಯು ಟರ್ಕಿ ಸರಕಾರದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಮತ್ತು ಭಾರತದೊಂದಿಗೆ ಯಾವುದೇ ಸಂಘರ್ಷಗಳು ಅಥವಾ ಸಮಸ್ಯೆಗಳನ್ನು ಹೊಂದಿಲ್ಲ ಎಂದು ನ್ಯಾ.ಸಚಿನ ದತ್ತಾ ಅವರ ಗಮನಕ್ಕೆ ತಂದರು.
ಕಂಪೆನಿಯೊಂದಿಗೆ ಕೆಲಸ ಮಾಡುತ್ತಿರುವ ಜನರು ಭಾರತೀಯರಾಗಿದ್ದಾರೆ. ಕಂಪೆನಿಯು ಹಲವಾರು ವಿಮಾನ ನಿಲ್ದಾಣಗಳಲ್ಲಿ 10,000ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ. ಕಂಪೆನಿಯು ಯಾವುದೇ ಕಳಂಕವಿಲ್ಲದೆ ತೃಪ್ತಿಕರವಾಗಿ ಕಾರ್ಯ ನಿರ್ವಹಿಸಿದೆ ಎಂದು ಅವರು ತಿಳಿಸಿದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಉದ್ವಿಗ್ನತೆಗಳ ಮಧ್ಯೆ ತನ್ನ ಭದ್ರತಾ ಅನುಮತಿಯನ್ನು ರದ್ದುಗೊಳಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸೆಲೆಬಿ ಏರ್ಪೋರ್ಟ್ ಸರ್ವಿಸಸ್ ಇಂಡಿಯಾ ದಿಲ್ಲಿ ಉಚ್ಛ ನ್ಯಾಯಾಲಯದ ಮೆಟ್ಟಿಲೇರಿದೆ.
ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿದ್ದ ಟರ್ಕಿಯ ಕಂಪೆನಿಗಳ ವಿರುದ್ಧ ಭಾರತದಲ್ಲಿ ಸಾರ್ವಜನಿಕ ಆಕ್ರೋಶದ ನಡುವೆ ಸರಕಾರವು ‘ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿ’ಯಲ್ಲಿ ಮೇ 15ರಂದು ಸೆಲೆಬಿಯ ಭದ್ರತಾ ಅನುಮತಿಯನ್ನು ರದ್ದುಗೊಳಿಸಿತ್ತು.
ಬುಧವಾರ ವಿಚಾರಣೆ ಸಂದರ್ಭದಲ್ಲಿ ಭಾರತ ಸರಕಾರದ ಕ್ರಮವು ಕಾನೂನಿಗೆ ವಿರುದ್ಧವಾಗಿದೆ ಎಂದು ವಾದಿಸಿದ ರೋಹಟ್ಗಿ, 2023ರ ವಿಮಾನ ನಿಲ್ದಾಣಗಳ ಭದ್ರತಾ ನಿಯಮಗಳಡಿ ಕಂಪೆನಿಯು ತನ್ನ ಅಹವಾಲುಗಳನ್ನು ಹೇಳಿಕೊಳ್ಳಲು ಅವಕಾಶ ಕಲ್ಪಿಸುವುದು ಕಡ್ಡಾಯವಾಗಿದೆ ಎಂದರು.
ಇದು ನೈಸರ್ಗಿಕ ನ್ಯಾಯದ ತತ್ವಗಳ ಉಲ್ಲಂಘನೆಯಾಗಿದೆ ಎಂದೂ ಹೇಳಿದ ಅವರು,ನ್ಯಾಯಾಲಯಕ್ಕೆ ಮಾತ್ರ ಲಭ್ಯವಾಗುವಂತೆ ಮುಚ್ಚಿದ ಲಕೋಟೆಯಲ್ಲಿ ರದ್ದತಿಗೆ ಕಾರಣಗಳನ್ನು ಸಲ್ಲಿಸುವ ಕೇಂದ್ರದ ನಿರ್ಧಾರಕ್ಕೂ ಆಕ್ಷೇಪ ವ್ಯಕ್ತಪಡಿಸಿದರು.
ಲಕೋಟೆಯಲ್ಲಿನ ವಿಷಯಗಳು ಕಂಪೆನಿಗೆ ತಿಳಿದಿಲ್ಲ ಮತ್ತು ಅದು ಕೇವಲ ಊಹಿಸಬಹುದು ಎಂದ ಅವರು,ಟರ್ಕಿಯ ಪಾಲು ಬಂಡವಾಳ ಏಕೈಕ ಸಮಸ್ಯೆಯಾಗಿರುಂತೆ ಕಂಡು ಬರುತ್ತಿದೆ ಎಂದರು.
ರೋಹಟ್ಗಿ ವಾದಕ್ಕೆ ಪ್ರತಿಕ್ರಿಯಿಸಿದ ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು, ಕೆಲವು ವಿವರಗಳನ್ನು ನ್ಯಾಯಾಲಯದೊಂದಿಗೆ ಮಾತ್ರ ಹಂಚಿಕೊಳ್ಳಬಹುದೇ ಹೊರತು ಕಂಪೆನಿಯೊಂದಿಗಲ್ಲ ಎಂದು ಹೇಳಿದರು.
ಮೇ 16 ಆದೇಶಕ್ಕೆ ಮುನ್ನ ಸೆಲೆಬಿಯು ದಿಲ್ಲಿ, ಮುಂಬೈ, ಕೊಚ್ಚಿ, ಕಣ್ಣೂರು, ಬೆಂಗಳೂರು, ಹೈದರಾಬಾದ್, ಮೋಪಾ(ಗೋವಾ), ಅಹ್ಮದಾಬಾದ್ ಮತ್ತು ಚೆನ್ನೈ ಸೇರಿದಂತೆ ಹಲವು ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಿಸುತ್ತಿತ್ತು.







