ಮುಂಬೈನ ಶೇ.10.64ರಷ್ಟು ಮತದಾರರು ಒಂದಕ್ಕಿಂತ ಹೆಚ್ಚು ನೋಂದಣಿಗಳನ್ನು ಹೊಂದಿದ್ದಾರೆ : ಎಸ್ಇಸಿ ದತ್ತಾಂಶ

Photo Credit : PTI
ಮುಂಬೈ,ನ.27: ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗವು (ಎಸ್ಇಸಿ) ಹಂಚಿಕೊಂಡಿರುವ ದತ್ತಾಂಶಗಳ ಪ್ರಕಾರ ಮುಂಬೈನ 1.03 ಕೋಟಿ ಮತದಾರರ ಪೈಕಿ ಸುಮಾರು ಶೇ.10.64ರಷ್ಟು ಅಥವಾ 11 ಲಕ್ಷಕ್ಕೂ ಅಧಿಕ ಜನರು ಮತದಾರರ ಪಟ್ಟಿಗಳಲ್ಲಿ ಬಹು ನೋಂದಣಿಗಳನ್ನು ಹೊಂದಿದ್ದಾರೆ.
ಇಂತಹ ಮತದಾರರು ಅಧಿಕ ಸಂಖ್ಯೆಯಲ್ಲಿರುವ ಹೆಚ್ಚಿನ ವಾರ್ಡ್ಗಳನ್ನು ಈ ಹಿಂದೆ ವಿರೋಧ ಪಕ್ಷಗಳ ಕಾರ್ಪೊರೇಟರ್ ಗಳು ಪ್ರತಿನಿಧಿಸಿದ್ದರು ಎಂದು ದತ್ತಾಂಶಗಳು ತೋರಿಸಿವೆ.
ಎಸ್ಇಸಿ ಬುಧವಾರ ಆಕ್ಷೇಪಣೆಗಳನ್ನು ಸಲ್ಲಿಸಲು ಗಡುವನ್ನು ನ.27ರಿಂದ ಡಿ.3ರವರೆಗೆ ವಿಸ್ತರಿಸಿದೆ. ಅಂತಿಮ ಮತದಾರರ ಪಟ್ಟಿಗಳನ್ನು ಡಿ.10ರಂದು ಪ್ರಕಟಿಸಲಾಗುವುದು ಎಂದು ಅದು ತಿಳಿಸಿದೆ.
ಕಳೆದ ವಾರ ಪ್ರಕಟಗೊಂಡ ಕರಡು ಮತದಾರರ ಪಟ್ಟಿಗಳಲ್ಲಿ 4.33 ಲಕ್ಷ ಮತದಾರರು ಒಂದಕ್ಕಿಂತ ಹೆಚ್ಚು ಸಲ ಕಾಣಿಸಿಕೊಂಡಿದ್ದಾರೆ. ಈ ಮತದಾರರು ಎರಡರಿಂದ 103 ಸಲದವರೆಗೆ ನೋಂದಣಿಗಳನ್ನು ಹೊಂದಿರುವುದು ಕಂಡು ಬಂದಿದೆ. ಇಂತಹ ಬಹು ನೋಂದಣಿಗಳ ಸಂಖ್ಯೆ 11,01,505ರಷ್ಟಿದೆ.
ಮುದ್ರಣ ದೋಷಗಳು, ಮತದಾರರ ಸ್ಥಳಾಂತರ ಮತ್ತು ಮೃತ ವ್ಯಕ್ತಿಗಳ ಹೆಸರುಗಳನ್ನು ತೆಗೆದುಹಾಕುವಲ್ಲಿ ವೈಫಲ್ಯದಂತಹ ಅಂಶಗಳು ಮತದಾರರ ಹೆಸರುಗಳ ಪುನರಾವರ್ತನೆಗೆ ಕಾರಣವಾಗಿವೆ ಎಂದು ಎಸ್ಇಸಿ ಹೇಳಿದೆ.
ಬೂತ್ ಮಟ್ಟದ ಕಾರ್ಯಕರ್ತರು ಈಗ ಕ್ಷೇತ್ರಗಳಿಗೆ ಭೇಟಿ ನೀಡಿ ಫಾರಂಗಳನ್ನು ಭರ್ತಿ ಮಾಡುತ್ತಿದ್ದಾರೆ ಹಾಗೂ ಪ್ರತಿ ಮತದಾರರು ಒಂದೇ ಬಾರಿ ನೋಂದಣಿ ಮಾಡಲ್ಪಟ್ಟಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಪರಿಶೀಲನೆಗಳನ್ನು ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಜ.31, 2026ರೊಳಗೆ ಮುಗಿಯಬೇಕಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಗಳು ಕೊಂಚ ವಿಳಂಬಗೊಳ್ಳಬಹುದು ಎಂದು ಎಸ್ಇಸಿ ಅಧಿಕಾರಿಯೋರ್ವರು ಸುಳಿವು ನೀಡಿದರು.
ಹೆಚ್ಚಿನ ಸಂಖ್ಯೆಯ ಬಹುನೋಂದಣಿ ಮತದಾರರನ್ನು ಹೊಂದಿರುವ ಐದು ವಾರ್ಡ್ಗಳ ಪೈಕಿ ನಾಲ್ಕನ್ನು ಈ ಹಿಂದೆ ಶಿವಸೇನೆ(ಯುಬಿಟಿ) ಮತ್ತು ಎನ್ಸಿಪಿ (ಎಸ್ಪಿ)ಯಂತಹ ಪ್ರತಿಪಕ್ಷಗಳ ಕಾರ್ಪೊರೇಟರ್ಗಳು ಪ್ರತಿನಿಧಿಸಿದ್ದರು. ಈ ಪೈಕಿ ಎರಡು ವಾರ್ಡ್ಗಳು ಶಿವಸೇನೆ(ಯುಬಿಟಿ) ಶಾಸಕ ಆದಿತ್ಯ ಠಾಕ್ರೆ ಪ್ರತಿನಿಧಿಸುತ್ತಿರುವ ವರ್ಲಿ ವಿಧಾನಸಭಾ ವ್ಯಾಪ್ತಿಯಲ್ಲಿವೆ ಎನ್ನುವುದನ್ನು ಎಸ್ಇಸಿ ದತ್ತಾಂಶಗಳು ತೋರಿಸಿವೆ.
ಈ ನಡುವೆ, ಪ್ರಸ್ತುತ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಪ್ರತಿಪಕ್ಷದ ನಾಯಕರು ಆರೋಪಿಸಿದ್ದಾರೆ.







