ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ, ಭೂಕುಸಿತ: ಒಂದೇ ಕುಟುಂಬದ ಏಳು ಮಂದಿ ಸಹಿತ 11 ಜನರು ಮೃತ್ಯು

Photo credit: PTI
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಹಾಗೂ ರಂಬನ್ ಜಿಲ್ಲೆಗಳಲ್ಲಿ ಮೇಘಸ್ಫೋಟ ಹಾಗೂ ಭಾರಿ ಮಳೆಯಿಂದಾಗಿ ಸಂಭವಿಸಿದ ಎರಡು ಪ್ರತ್ಯೇಕ ಭೂಕುಸಿತ ಘಟನೆಗಳಲ್ಲಿ ಒಂದೇ ಕುಟುಂಬದ ಏಳು ಮಂದಿ ಸದಸ್ಯರು ಸೇರಿದಂತೆ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ರಿಯಾಸಿ ಜಿಲ್ಲೆಯ ದೂರ ಪ್ರದೇಶವಾದ ಮಹೋರ್ ಪ್ರದೇಶದ ಬದ್ದಾರ್ ಗ್ರಾಮದಲ್ಲಿ ರಾತ್ರೋರಾತ್ರಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ 38 ವರ್ಷದ ನಾಝೀರ್ ಅಹ್ಮದ್ ಎಂಬವರ ಮನೆ ಮುಚ್ಚಿಹೋಗಿದ್ದು, ಈ ಘಟನೆಯಲ್ಲಿ ನಾಝೀರ್ ಆಹ್ಮದ್, ಅವರ ಪತ್ನಿ, ಅವರ 5-13 ವರ್ಷ ವಯಸ್ಸಿನ ಐವರು ಮಕ್ಕಳು ಮೃತಪಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು, ಭಾರಿ ಮಳೆಯ ನಡುವೆ ಕೆಸರಿನಿಂದಾವೃತ್ತವಾಗಿದ್ದ ಸ್ಥಳದಿಂದ ಶನಿವಾರ ಬೆಳಗ್ಗೆ ಮೃತದೇಹಗಳನ್ನು ಹೊರ ತೆಗೆದಿವೆ.
ರಂಬನ್ ಜಿಲ್ಲೆಯ ರಾಜ್ ಗಢ ಗ್ರಾಮದಲ್ಲಿ ನಡೆದಿರುವ ಮತ್ತೊಂದು ಮೇಘ ಸ್ಫೋಟದಿಂದುಟಾದ ಭಾರಿ ಪ್ರವಾಹದಲ್ಲಿ ಐವರು ಕೊಚ್ಚಿಕೊಂಡು ಹೋಗಿದ್ದಾರೆ. ಈ ದಿಢೀರ್ ಪ್ರವಾಹದಿಂದ ಹಲವಾರು ಮನೆಗಳಿಗೆ ಹಾನಿಯಾಗಿದ್ದು, ಸ್ಥಳೀಯ ಶಾಲೆಯೊಂದಕ್ಕೂ ಅಪ್ಪಳಿಸಿದೆ. ಅದೃಷ್ಟವಶಾತ್ ಈ ವೇಳೆ ಶಾಲೆಯಲ್ಲಿ ಯಾವ ಮಕ್ಕಳೂ ಇರಲಿಲ್ಲ ಎನ್ನಲಾಗಿದೆ. ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಐವರ ಪೈಕಿ, ನಾಲ್ವರ ಮೃತದೇಹಗಳು ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಮತ್ತೊಬ್ಬ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಆತ ಕೂಡಾ ಈ ಘಟನೆಯಲ್ಲಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.







