ಕೇರಳ| ಎರಡು ತಿಂಗಳಲ್ಲಿ ಒಂಬತ್ತು ಆನೆಗಳ ಕಳೇಬರ ಪತ್ತೆ: ತನಿಖೆಗೆ ಸಮಿತಿ ರಚನೆ

ಸಾಂದರ್ಭಿಕ ಚಿತ್ರ (PTI)
ತಿರುವನಂತಪುರಂ: ಕಳೆದ ಎರಡು ತಿಂಗಳಲ್ಲಿ ಒಂಬತ್ತು ಆನೆಗಳ ಕಳೇಬರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಈ ಕುರಿತು ತನಿಖೆ ನಡೆಸಲು 11 ಸದಸ್ಯರ ಸಮಿತಿಯನ್ನು ರಚಿಸಿ ವನ್ಯಜೀವಿ ಮುಖ್ಯ ವಾರ್ಡನ್ ಪ್ರಮೋದ್ ಜಿ. ಕೃಷ್ಣನ್ ಆದೇಶಿಸಿದ್ದಾರೆ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಕೆ.ವಿನೋದ್ ಕುಮಾರ್ ಸಮಿತಿಯ ಅಧ್ಯಕ್ಷತೆ ವಹಿಸಲಿದ್ದಾರೆ.
ಕೊಚ್ಚಿಯ ಮಲಯತ್ತೂರು ಅರಣ್ಯ ವಿಭಾಗದ ನದಿಯಲ್ಲಿ ಆನೆಗಳ ಕಳೇಬರ ಪದೇ ಪದೇ ಪತ್ತೆಯಾಗುತ್ತಿದ್ದು, ಕಾರಣ ನಿಗೂಢವಾಗಿದೆ. ಕಳೆದ ಎರಡು ತಿಂಗಳಲ್ಲಿ ಪೂಯಂಕುಟ್ಟಿ ನದಿಯಲ್ಲಿ ಒಂಬತ್ತು ಕಾಡಾನೆಗಳ ಕಳೇಬರ ಪತ್ತೆಯಾಗಿವೆ ಎಂದು ವರದಿಯಾಗಿದೆ.
ಅರಣ್ಯ ಪ್ರದೇಶಗಳಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಆನೆಗಳ ಹಿಂಡು ಕೊಚ್ಚಿ ಹೋಗಿರಬಹುದು ಎಂದು ಅರಣ್ಯ ಇಲಾಖೆ ಪ್ರಾಥಮಿಕ ಅಂದಾಜು ಮಾಡಿದೆ. ಆದರೆ, ಈ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ಅತಿಕ್ರಮಣಗಳು ವ್ಯಾಪಕವಾಗಿ ನಡೆಯುತ್ತಿದ್ದು, ಈ ನಡುವೆ ಆನೆಗಳ ಸಾವು ಸಂಶಯಾಸ್ಪದವಾಗಿದೆ ಎಂದು ವನ್ಯಜೀವಿ ಕಾರ್ಯಕರ್ತರು ಆರೋಪಿಸುತ್ತಾರೆ.
ಅರಣ್ಯದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆಯೆ ಅಥವಾ ಅರಣ್ಯ ಅಧಿಕಾರಿಗಳ ಕಡೆಯಿಂದಲೇ ಲೋಪವಾಗಿದೆಯೆ ಎಂಬುದನ್ನು ಪರಿಶೀಲಿಸಲು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಕೆ.ವಿನೋದ್ ಕುಮಾರ್ ನೇತೃತ್ವದ ಸಮಿತಿಗೆ ಸೂಚನೆ ನೀಡಲಾಗಿದೆ.
ದಿಢೀರ್ ಪ್ರವಾಹದಲ್ಲಿ ಆನೆಗಳ ಹಿಂಡು ಕೊಚ್ಚಿ ಹೋಗಿರಬಹುದು ಎಂಬುದು ಪ್ರಾಥಮಿಕ ಅಂದಾಜಾಗಿದ್ದರೂ, ತನಿಖೆಯ ವೇಳೆ ಎಲ್ಲ ಆಯಾಮಗಳನ್ನೂ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪ್ರಮೋದ್ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ವನ್ಯಜೀವಿ ಕಾರ್ಯಕರ್ತ ಎಂ.ಎನ್.ಜಯಚಂದ್ರನ್, ಪ್ರವಾಹದಲ್ಲಿ ಕಾಡಾನೆಗಳು ಕೊಚ್ಚಿ ಹೋಗಿವೆ ಎಂಬುದನ್ನು ನಂಬುವುದು ಕಷ್ಟ. ಕಾಡಾನೆಗಳ ಸಾವು ನಿಗೂಢವಾಗಿದ್ದು, ಸತ್ಯ ಹೊರಬರಲು ನ್ಯಾಯಯುತ ತನಿಖೆ ಅತ್ಯಗತ್ಯ ಎಂದು ಆಗ್ರಹಿಸಿದ್ದಾರೆ.







