ಕೇರಳ | ರಸ್ತೆ ಬದಿಯಲ್ಲಿ ನಿಗೂಢ ವಸ್ತು ಸ್ಫೋಟ: ಬಾಲಕನಿಗೆ ಗಂಭೀರ ಗಾಯ

ಸಾಂದರ್ಭಿಕ ಚಿತ್ರ (PTI)
ಪಾಲಕ್ಕಾಡ್ (ಕೇರಳ): ಉತ್ತರ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ರಸ್ತೆ ಬದಿ ಬಿದ್ದಿದ್ದ ನಿಗೂಢ ವಸ್ತುವೊಂದು ಸ್ಫೋಟಗೊಂಡ ಪರಿಣಾಮ, 11 ವರ್ಷದ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.
ಗಾಯಗೊಂಡ ಬಾಲಕನನ್ನು ವೀಟ್ಟಂಪಾರ ನಿವಾಸಿ ಶ್ರೀಹರ್ಷನ್ ಎಂದು ಗುರುತಿಸಲಾಗಿದೆ.
ರವಿವಾರ ಬೆಳಗ್ಗೆ ತನ್ನ ತಾಯಿಯೊಂದಿಗೆ ಶ್ರೀಹರ್ಷನ್ ನಡೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಬಾಲಕ ರಸ್ತೆಯಲ್ಲಿ ನಡೆದು ಹೋಗುವಾಗ, ರಸ್ತೆ ಬದಿಯಲ್ಲಿದ್ದ ವಸ್ತುವೊಂದಕ್ಕೆ ಅಕಸ್ಮಾತ್ತಾಗಿ ಆತನ ಕಾಲು ತಾಗಿದೆ. ಆಗ ತಕ್ಷಣವೇ ಆ ವಸ್ತು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಬಾಲಕನ ಪಾದದ ಮೇಲ್ಭಾಗದ ಮಾಂಸ ಖಂಡವೇ ಕಿತ್ತು ಬಂದಿದ್ದು, ತಕ್ಷಣವೇ ಆತನನ್ನು ಪೆರಿಂತಲ್ಮಣ್ಣದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ಒಟ್ಟಪ್ಪಾಲಂ ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯವಾಗಿ ಕಾಡು ಹಂದಿಗಳ ಉಪಟಳ ಹೆಚ್ಚಾಗಿರುವುದರಿಂದ, ಪ್ರಾಣಿಗಳನ್ನು ಓಡಿಸಲು ಅಥವಾ ಬೇಟೆಯಾಡಲು ಸ್ಥಳೀಯರು ಇರಿಸಿದ್ದ ನಾಡ ಬಾಂಬ್ ಇದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ತನಿಖಾ ತಂಡ, “ಈ ಪ್ರದೇಶದಲ್ಲಿ ಕಾಡು ಹಂದಿ ಸೇರಿದಂತೆ ವನ್ಯಜೀವಿಗಳ ಓಡಾಟ ಹೆಚ್ಚಿದೆ. ಹೀಗಾಗಿ ಕಾಡು ಪ್ರಾಣಿಗಳನ್ನು ಗುರಿಯಾಗಿಸಿಕೊಂಡು ಸ್ಫೋಟಕಗಳನ್ನು ಇಟ್ಟಿರುವ ಸಾಧ್ಯತೆ ಇದೆ. ವೈಜ್ಞಾನಿಕ ಪರಿಶೀಲನೆಯ ನಂತರವಷ್ಟೇ ಸ್ಫೋಟಕದ ನಿಖರ ಸ್ವರೂಪ ತಿಳಿದು ಬರಲಿದೆ” ಎಂದು ಹೇಳಿದೆ.
ಈ ಸಂಬಂಧ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಈ ನಡುವೆ, ಗಾಯಗೊಂಡಿರುವ ಬಾಲಕನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಸ್ಫೋಟಕಗಳನ್ನು ಇರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಮತ್ತು ಪೊಲೀಸ್ ಇಲಾಖೆಗಳು ಎಚ್ಚರಿಕೆ ನೀಡಿವೆ.







