ಕೇರಳ: ಸಾಕು ಬೆಕ್ಕು ಕಡಿತಕ್ಕೊಳಗಾದ ಬಾಲಕಿ ನಿಗೂಢ ಸಾವು!

ಹನ್ನಾ ಫಾತಿಮಾ (Photo credit: keralakaumudi.com)
ತಿರುವನಂತಪುರಂ: ಸಾಕು ಬೆಕ್ಕು ಕಚ್ಚಿ ಚಿಕಿತ್ಸೆ ಪಡೆಯುತ್ತಿದ್ದ 11 ವರ್ಷದ ಶಾಲಾ ಬಾಲಕಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಕೇರಳದ ಪಂಡಾಲಂ ಎಂಬಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ತೊಣ್ಣಲ್ಲೂರು ಸರ್ಕಾರಿ ಯುಪಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿ ಹನ್ನಾ ಫಾತಿಮಾ ಎಂದು ಗುರುತಿಸಲಾಗಿದೆ.
ಬುಧವಾರ ಮನೆಯಲ್ಲಿನ ಸಾಕು ಬೆಕ್ಕು ಬಾಲಕಿಯನ್ನು ಕಚ್ಚಿದ್ದು, ಆಕೆಗೆ ಪಂದಳಂ ಕುಟುಂಬ ಆರೋಗ್ಯ ಕೇಂದ್ರದಲ್ಲಿ ರೇಬೀಸ್ ಲಸಿಕೆಯನ್ನು ನೀಡಲಾಗಿತ್ತು. ಬಳಿಕ ಅಡೂರ್ ಜನರಲ್ ಆಸ್ಪತ್ರೆಯಲ್ಲಿ ಮುಂದಿನ ಡೋಸ್ ಅನ್ನು ಕೂಡಾ ನೀಡಲಾಗಿತ್ತು.
ಶುಕ್ರವಾರ, ಶಾಲೆಗೆ ತೆರಳಿದ್ದಾಗ ಆಕೆಯ ಕುತ್ತಿಗೆಯ ಕೆಳಗೆ ಊತವನ್ನು ಗಮನಿಸಿದ್ದ ಶಿಕ್ಷಕರು, ಆಕೆಯ ಪೋಷಕರಿಗೆ ಮಾಹಿತಿ ನೀಡಿ ಮನೆಗೆ ಕಳುಹಿಸಿದ್ದರು.
ಸೋಮವಾರ, ಹನ್ನಾಳನ್ನು ಎರಡನೇ ಡೋಸ್ ಲಸಿಕೆ ಹಾಕಿಸಲಾಗಿತ್ತು. ಆದಾಗ್ಯೂ, ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ ಬಳಿಕ, ಆಕೆಯ ಅಸ್ವಸ್ಥತೆ ಹೆಚ್ಚಾಗಿದೆ.
ಆಕೆಯ ಸ್ಥಿತಿ ಹದಗೆಟ್ಟಂತೆಯೇ, ಆಕೆಯನ್ನು ಪಥನಂತಿಟ್ಟ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲೂ ಚೇತರಿಕೆ ಕಾಣದಿದ್ದಾಗ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಗುರುವಾರ ಬೆಳಿಗ್ಗೆ ಚಿಕಿತ್ಸೆ ಪಡೆಯುತ್ತಿರುವ ಮಧ್ಯೆಯೇ ಆಕೆ ಮೃತಪಟ್ಟಿದ್ದಾಳೆ.
ಆರಂಭಿಕ ಪರೀಕ್ಷೆಗಳು ರೇಬೀಸ್ ಅನ್ನು ನಿರಾಕರಿಸಿದ್ದು, ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ತಜ್ಞರ ವಿಶ್ಲೇಷಣೆಗಾಗಿ ಮಾದರಿಗಳನ್ನು ಸಂಗ್ರಹಿಸಲಾಗಿದೆ, ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಎಲ್. ಅನಿತಾಕುಮಾರಿ ಹೇಳಿದ್ದಾರೆ.







