ಎಸ್ಐಆರ್ ಆತಂಕದಿಂದ ಪಶ್ಚಿಮ ಬಂಗಾಳದಲ್ಲಿ 110 ಜನರು ಮೃತಪಟ್ಟಿದ್ದಾರೆ: ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ|PC : PTI
ಕೋಲ್ಕತಾ,ಜ.24: ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಆತಂಕದಿಂದಾಗಿ 110ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಶುಕ್ರವಾರ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಜನ್ಮದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ಪ್ರತಿ ದಿನ 3-4 ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರ ಇದರ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದು ಹೇಳಿದರು. ಚುನಾವಣಾ ಆಯೋಗದ ವಿರುದ್ಧ ಪ್ರಕರಣವನ್ನೇಕೆ ದಾಖಲಿಸಬಾರದು ಎಂದು ಅವರು ಪ್ರಶ್ನಿಸಿದರು.
ಚುನಾವಣಾ ಆಯೋಗವು ಎಸ್ಐಆರ್ ಪ್ರಕ್ರಿಯೆ ಮೂಲಕ ಮತದಾರರಿಗೆ ಕಿರುಕುಳ ನೀಡುತ್ತದೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಅಪಾಯದಲ್ಲಿ ಸಿಲುಕಿಸುತ್ತಿದೆ ಎಂದು ಮಮತಾ ಆರೋಪಿಸುತ್ತಲೇ ಬಂದಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಹಲವಾರು ಬೂತ್ ಮಟ್ಟದ ಅಧಿಕಾರಿಗಳು ಎಸ್ಐಆರ್ ಕಾರ್ಯಭಾರದ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಥವಾ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಅಕ್ಟೋಬರ್ನಲ್ಲಿ ತನ್ನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಆತಂಕದಿಂದ 95ರ ವೃದ್ಧರೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು.







