ಇಎಸ್ಇ ಪರೀಕ್ಷೆಯಲ್ಲಿ 112ನೇ ರ್ಯಾಂಕ್; ಸೆರೆಬ್ರಲ್ ಪಾಲ್ಸಿ ಬಾಧಿತ ಯುವಕನ ಅಮೋಘ ಸಾಧನೆ

PC: screengrab/x.com/PTI_News
ಮೀರಠ್: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) 2025ನೇ ಸಾಲಿನ ಎಂಜಿನಿಯರಿಂಗ್ ಸೇವಾ ಪರೀಕ್ಷೆ (ಇಎಸ್ಇ) ಫಲಿತಾಂಶ ಪ್ರಕಟಿಸಿದ್ದು, ಅಖಿಲ ಭಾರತ ಮಟ್ಟದಲ್ಲಿ 112ನೇ ರ್ಯಾಂಕ್ ಗಳಿಸಿದ ಮನ್ವೇಂದ್ರ ಸಿಂಗ್, ಮೊದಲನೇ ಪ್ರಯತ್ನದಲ್ಲೇ ಎಂಜಿನಿಯರಿಂಗ್ ಸೇವೆಗೆ ಆಯ್ಕೆಯಾದ ವಿಶಿಷ್ಟ ಸಾಧನೆಯಿಂದ ಗಮನ ಸೆಳೆದಿದ್ದಾರೆ.
24 ವರ್ಷ ವಯಸ್ಸಿನ, ಐಐಟಿ ಪದವೀಧರನ ಹೋರಾಟದ ಪಯಣ ಈ ಸಾಧನೆಯೊಂದಿಗೆ ದೊಡ್ಡ ಮೈಲುಗಲ್ಲು ತಲುಪಿದೆ. ಅಂಗಾಂಗಗಳ ನಿಯಂತ್ರಣ ಕಷ್ಟಸಾಧ್ಯವಾದ ಸೆರೆಬ್ರಲ್ ಪಾಲ್ಸಿಕಾಯಿಲೆಯ ವಿರುದ್ಧ ಹೋರಾಡಿ ಜಯಿಸಿರುವುದು ಈತನ ಯಶೋಗಾಥೆಯನ್ನು ಜಗಜ್ಜಾಹೀರು ಮಾಡಿದೆ.
ಬಾಲ್ಯದಿಂದಲೇ ನಡೆಸಿದ ಬಾಳಿನ ಹೋರಾಟದಲ್ಲಿ ಯಶಸ್ಸು ಸಿಕ್ಕಿರುವುದು ವಿಶೇಷ. ಬಾಲ್ಯದಲ್ಲಿ ಪ್ರತಿಕೂಲ ದೈಹಿಕ ಸ್ಥಿತಿಯಿಂದಾಗಿ ಪೆನ್ಸಿಲ್ ಹಿಡಿಯಲೂ ಕಷ್ಟಪಡಬೇಕಾದ ಸ್ಥಿತಿ. ಅಲ್ಲಿಂದ ಹೋರಾಟದ ಬದುಕು ಎಂಜಿನಿಯರಿಂಗ್ ಕಲಿಕೆಯವರೆಗೆ ಮುಂದುವರಿದಿತ್ತು. ಇದೀಗ ದೈಹಿಕ ಇತಿಮಿತಿಯ ಹೊರತಾಗಿಯೂ ಮಹತ್ವಾಕಾಂಕ್ಷಿ ಸಾಧನೆ ಮಾಡುವಲ್ಲಿಗೆ ಬಾಳಿನ ಒಂದು ಅಧ್ಯಾಯ ಮುಗಿದಂತಾಗಿದೆ.
ಬುಲಂದರ್ ಶಹರ್ ಜಿಲ್ಲೆಯ ಅವಾಸ್ ವಿಕಾಸ್ ನಿವಾಸಿಯಾಗಿರುವ ಮನ್ವೇಂದರ್ ಗೆ ಚಲನೆಯನ್ನು ನಿಯಂತ್ರಿಸುವ ಮತ್ತು ಮಾಂಸಖಂಡದ ನಿಯಂತ್ರಣ ಕಳೆದುಕೊಳ್ಳುವ ನರಸಂಬಂಧಿ ಸಮಸ್ಯೆ ಸೆರೆಬ್ರಲ್ ಪಾಲ್ಸಿ ಎಂಬ ಭಯಾನಕ ಕಾಯಿಲೆ ಆರು ತಿಂಗಳ ಬಾಲಕನಿದ್ದಾಗಲೇ ಪತ್ತೆಯಾಗಿತ್ತು. ಎರಡು ವರ್ಷದವನಾಗಿದ್ದಾಗ ಕತ್ತು ಎತ್ತಿ ನಿಲ್ಲಲೂ ಸಾಧ್ಯವಾಗದ ಸ್ಥಿತಿ. ಬೆಳೆಯುತ್ತಿದ್ದಂತೆ ಪ್ರತಿಯೊಂದು ಕೆಲಸ ನಿರ್ವಹಿಸಲೂ ಹರಸಾಹಸ ಮಾಡಬೇಕಾಗಿತ್ತು.
ಖಾಸಗಿ ಶಾಲೆಯೊಂದರಲ್ಲಿ ಪ್ರಾಂಶುಪಾಲರಾಗಿರುವ ತಾಯಿ ರೇಣು ಸಿಂಗ್ ಮಗನ ಯಶೋಗಾಥೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಯುಪಿಎಸ್ಸಿಯಲ್ಲಿ ಉತ್ತೀರ್ಣವಾಗುವುದು ಕಠಿಣ ಹಾಗೂ ಹಲವು ಹಂತಗಳ ಪ್ರಕ್ರಿಯೆ. ಬದುಕಿನ ಪ್ರತಿ ಹಂತದಲ್ಲೂ ದೈಹಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಿಕೊಂಡು ಪೆನ್ಸಿಲ್ ಹಿಡಿಯುವುದನ್ನು ಕಲಿಯುವುದರಿಂದ ಹಿಡಿದು, ಸಂಕೀರ್ಣ ಶೈಕ್ಷಣಿಕ ಸವಾಲುಗಳಲ್ಲಿ ಪ್ರಾವೀಣ್ಯತೆ ಸಾಧಿಸಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.
ಜೀವನ ಪರ್ಯಂತ ಈ ಬಾಧೆಯಿಂದಾಗಿ ಭವಿಷ್ಯ ಭಯಾನಕ ಎಂದ ವೈದ್ಯರು ಆರಂಭದಲ್ಲೇ ಎಚ್ಚರಿಕೆ ನೀಡಿದ್ದರು. ರೇಣು ಸಿಂಗ್ ಬಾಲಕನನ್ನು ದೇಶಾದ್ಯಂತ 50ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ವೈದ್ಯಕೀಯ ಚಿಕಿತ್ಸೆಯ ಜತೆಗೆ ಇಚ್ಛಾಶಕ್ತಿ ಕೆಲಸ ಮಾಡಿತು ಎಂದು ಅವರು ಹೇಳುತ್ತಾರೆ. 17ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರೂ, ತಾಯಿಯ ನಿರಂತರ ಬೆಂಬಲದಿಂದ ಪಾಟ್ನಾ ಐಐಟಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದು ಬಳಿಕ ಎಂಜಿನಿಯರಿಂಗ್ ಸೇವೆ ಪರೀಕ್ಷೆಯನ್ನೂ ಯಶಸ್ವಿಯಾಗಿ ನಿಭಾಯಿಸಿರುವುದು ವಿಕಲ ಚೇತನರಿಗೆ ನಿಜಕ್ಕೂ ಸ್ಫೂರ್ತಿ.







