ಜಿಎಸ್ಟಿ: ಶೇ. 12 & 28ರ ಹಂತ ರದ್ದತಿಗೆ ಚಿಂತನೆ, ಹಾನಿಕಾರಕ ಸರಕುಗಳ ತೆರಿಗೆ ಶೇ. 40ಕ್ಕೆ ಏರಿಕೆ

ಸಾಂದರ್ಭಿಕ ಚಿತ್ರ | PC : freepik
ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಗೆ ಚಾಲನೆ ನೀಡಿದ ಎಂಟು ವರ್ಷಗಳ ಬಳಿಕ 2ನೇ ಹಂತದ ವ್ಯವಸ್ಥೆಯ ನೀಲಿನಕಾಶೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಸಾಮಾನ್ಯ ಬಳಕೆಯ ವಸ್ತುಗಳಿಗೆ ಶೇಕಡ 5ರಷ್ಟು ತೆರಿಗೆ ಮತ್ತು ಉಳಿಕೆ ವಸ್ತುಗಳಿಗೆ ಶೇಕಡ 18ರ ತೆರಿಗೆ ನಿಗದಿಪಡಿಸಲು ಉದ್ದೇಶಿಸಲಾಗಿದೆ. ಇದು ಜೀವನವನ್ನು ಸರಳಗೊಳಿಸಲಿದ್ದು, ನಾಗರಿಕರು ಮತ್ತು ವ್ಯವಹಾರಗಳ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಲಿದೆ.
ರಾಜ್ಯಗಳ ಹಣಕಾಸು ಸಚಿವರ ತಂಡ ಗುರುವಾರ ನಡೆಸಿದ ವ್ಯಾಪಕ ಚರ್ಚೆಯ ಬಳಿಕ ಶೇಕಡ 12 ಮತ್ತು ಶೇಕಡ 28ರ ತೆರಿಗೆ ಸ್ತರಗಳನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ. ಅಂತೆಯೇ ಮಾರ್ಚ್ ಗೆ ಗಡುವು ವಿಧಿಸಲಾಗಿದ್ದ ಪರಿಹಾರಾತ್ಮಕ ಸೆಸ್ ಕೂಡಾ ಕೊನೆಗೊಳ್ಳಲಿದೆ. ಇದರ ಜತೆಗೆ ಹಾನಿಕಾರಕ ಸರಕುಗಳ ಮೇಲಿನ ತೆರಿಗೆ ಶೇಕಡ 40ಕ್ಕೇರಲಿದೆ.
ಆಹಾರ ಮತ್ತು ಔಷಧಗಳು, ವೈದ್ಯಕೀಯ ಸಾಧನಗಳು, ಲೇಖನ ಸಾಮಗ್ರಿ ಮತ್ತು ಶೈಕ್ಷಣಿಕ ಉತ್ಪನ್ನಗಳು ಹಾಗೂ ದಿನಬಳಕೆಯ ಅಗತ್ಯ ವಸ್ತುಗಳಾದ ಕೇಶತೈಲ ಮತ್ತು ಟೂತ್ ಬ್ರಷ್ ಶೇಕಡ 5ರ ತೆರಿಗೆ ಸ್ತರದಲ್ಲಿ ಬರಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಧ್ಯಮವರ್ಗದವರು ಬಳಸುವ ಹವಾನಿಯಂತ್ರಣ ಯಂತ್ರ, ರೆಫಿಜರೇಟರ್ ನಂಥ ಸಾಮಗ್ರಿಗಳ ಮೇಲಿನ ತೆರಿಗೆ ಶೇಕಡ 18ರಷ್ಟು ಇರಲಿದೆ. ಅಟೊಮೊಬೈಲ್ ಮತ್ತು ಸಿಮೆಂಟ್ ಮೇಲೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ ಎಂಬ ಸ್ಪಷ್ಟನೆ ಇನ್ನೂ ಇಲ್ಲ. ಇದೀಗ ಶೇಕಡ 28ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು.
ಜತೆಗೆ ಆರೋಗ್ಯ ಮತ್ತು ಅವಧಿ ವಿಮಾ ಪಾಲಿಸಿಗಳ ಮೇಲಿನ ತೆರಿಗೆ ಕಡಿತಗೊಳ್ಳಲಿದ್ದು, ಹಲವು ತಿಂಗಳುಗಳಿಂದ ಈ ಪ್ರಸ್ತಾಪ ಪರಿಶೀಲನೆಯಲ್ಲಿತ್ತು. ವಿಮೆಯ ಜತೆಗೆ ಅಟೊಮೋಬೈಲ್, ಆರೋಗ್ಯ, ಕರಕುಶಲ, ಕೃಷಿ ಸರಕುಗಳು, ಜವಳಿ, ರಸಗೊಬ್ಬರ ಮತ್ತು ಪುನರ್ಬಳಕೆ ಇಂಧನದಂಥ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡುವ ಸಾಧ್ಯತೆ ಇದೆ.







