ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದಿಂದ ದೂರವುಳಿದ 12 ಸಂಸದರು

ಸಿ.ಪಿ.ರಾಧಾಕೃಷ್ಣನ್, ಬಿ.ಸುದರ್ಶನ್ ರೆಡ್ಡಿ (Photo: PTI)
ಹೊಸದಿಲ್ಲಿ: ದೇಶದ ಉಪರಾಷ್ಟ್ರಪತಿ ಚುನಾವಣೆಯ ನಡುವೆಯೇ ಪ್ರಮುಖ ಬೆಳವಣಿಗೆ ಕಂಡುಬಂದಿದೆ. ಮಂಗಳವಾರ ನಡೆಯುತ್ತಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು ಮೂರು ಪ್ರಮುಖ ಪಕ್ಷಗಳ 12 ಸಂಸದರು ಮತದಾನದಿಂದ ದೂರವಿರುವುದಾಗಿ ಘೋಷಣೆ ಮಾಡಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿ, ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಹಾಗೂ ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ನಡುವೆ ನೇರ ಹೋರಾಟ ನಡೆಯಲಿದೆ. ಆದರೆ, ಮೂರು ಪ್ರಮುಖ ಪ್ರಾದೇಶಿಕ ಪಕ್ಷಗಳ ನಿರ್ಧಾರದಿಂದ ರಾಜಕೀಯ ಸಮೀಕರಣಗಳು ಹೊಸ ತಿರುವು ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ಮತದಾನ ಬಹಿಷ್ಕರಿಸಿದ ಪಕ್ಷಗಳು:
ಬಿಜು ಜನತಾದಳ (ಬಿಜೆಡಿ) – 7 ಸಂಸದರು
ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ತನ್ನ ಏಳು ರಾಜ್ಯಸಭಾ ಸಂಸದರನ್ನು ಮತದಾನದಲ್ಲಿ ಭಾಗವಹಿಸದಂತೆ ಸೂಚಿಸಿದೆ. ಈ ಕುರಿತು ನೀಡಿರುವ ಪಕ್ಷದ ಪ್ರಕಟಣೆಯಲ್ಲಿ, “ಬಿಜೆಪಿ ನೇತೃತ್ವದ ಎನ್ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಎರಡರಿಂದಲೂ ಸಮಾನ ಅಂತರವನ್ನು ಕಾಯ್ದುಕೊಳ್ಳುವ ನಮ್ಮ ನೀತಿಯ ಭಾಗವಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ,” ಎಂದು ತಿಳಿಸಿದೆ.
ಬಿಜೆಡಿಗೆ ಲೋಕಸಭೆಯಲ್ಲಿ ಪ್ರತಿನಿಧಿಗಳಿಲ್ಲ.
ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) – 4 ಸಂಸದರು
ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ಎಸ್ ಪಕ್ಷವು ಯೂರಿಯಾ ಕೊರತೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
“ಕಳೆದ 20 ದಿನಗಳಿಂದ ಯೂರಿಯಾ ಕೊರತೆಯ ಬಗ್ಗೆ ಎಚ್ಚರಿಕೆ ನೀಡಿದ್ದರೂ ಪ್ರತಿಕ್ರಿಯೆ ಸಿಕ್ಕಿಲ್ಲ. 71 ಲಕ್ಷ ತೆಲಂಗಾಣ ರೈತರ ಪರವಾಗಿ ಏಕತೆ ತೋರಿಸಲು ಬಿಆರ್ಎಸ್ ಮತದಾನದಿಂದ ದೂರವಿರಲು ನಿರ್ಧರಿಸಿದೆ. ನೋಟಾ ಆಯ್ಕೆಯಾಗಿದ್ದರೆ, ನಾವು ಅದನ್ನೇ ಆರಿಸುತ್ತಿದ್ದೆವು,” ಎಂದು ಪಕ್ಷದ ಕಾರ್ಯಕಾರಿ ಅಧ್ಯಕ್ಷ ಕೆ.ಟಿ. ರಾಮರಾವ್ ಹೇಳಿದ್ದಾರೆ.
ಓರ್ವ ಸಂಸದರನ್ನು ಹೊಂದಿರುವ ರೋಮಣಿ ಅಕಾಲಿ ದಳ (ಎಸ್ಎಡಿ):
ಪಂಜಾಬ್ನಲ್ಲಿ ಉಂಟಾದ ಪ್ರವಾಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ಉಲ್ಲೇಖಿಸಿ ಶಿರೋಮಣಿ ಅಕಾಲಿ ದಳವು ಮತದಾನ ಬಹಿಷ್ಕರಿಸಿದೆ. ಕೇಂದ್ರದ ಮಾಜಿ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಪಕ್ಷವನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿದ್ದಾರೆ.
“ರಾಜ್ಯದ ಮೂರನೇ ಒಂದು ಭಾಗವು ನೀರಿನಲ್ಲಿ ಮುಳುಗಿದೆ. ಬೆಳೆಗಳು, ಮನೆಗಳು ನಾಶವಾಗಿವೆ. ಪಂಜಾಬಿಗಳಿಗೆ ಸಹಾಯ ಮಾಡಲು ಕೇಂದ್ರವೂ ಇಲ್ಲ, ರಾಜ್ಯ ಸರ್ಕಾರವೂ ಮುಂದೆ ಬಂದಿಲ್ಲ,” ಎಂದು ಪಕ್ಷದ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಸಂಸತ್ತಿನಲ್ಲಿ ಒಟ್ಟು 788 ಸದಸ್ಯರಿದ್ದಾರೆ. ರಾಜ್ಯಸಭೆಯಲ್ಲಿ 245, ಲೋಕಸಭೆಯಲ್ಲಿ 543 ಸದಸ್ಯರು ವಿವಿಧ ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದಾರೆ. ಈ ಪೈಕಿ 12 ನಾಮನಿರ್ದೇಶಿತ ಸದಸ್ಯರಿದ್ದಾರೆ. ಪ್ರಸ್ತುತ ಸದಸ್ಯರ ಸಂಖ್ಯೆ 781. ಈ ಪೈಕಿ ರಾಜ್ಯಸಭೆಯಲ್ಲಿ 6 ಹಾಗೂ ಲೋಕಸಭೆಯಲ್ಲಿ 1 ಸ್ಥಾನ ಖಾಲಿಯಿದೆ.
ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆಯುತ್ತಿರುವ ಮತದಾನದಿಂದ ಬಿಜೆಡಿ, ಬಿಆರ್ಎಸ್ ಮತ್ತು ಎಸ್ಎಡಿ ಪಕ್ಷಗಳ ಒಟ್ಟು 12 ಸಂಸದರು ದೂರವಿರುವುದರಿಂದ ಈ ಚುನಾವಣೆಯ ಫಲಿತಾಂಶದ ಸಮೀಕರಣಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.







