ಪಂಜಾಬ್: ವಿಷಪೂರಿತ ಮದ್ಯ ಸೇವಿಸಿ 14 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ (PTI)
ಅಮೃತಸರ (ಪಂಜಾಬ್): ವಿಷಪೂರಿತ ಮದ್ಯ ಸೇವಿಸಿ 14 ಮಂದಿ ಮೃತಪಟ್ಟು, 6 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಅಮೃತಸರದ ಮಜೀತಾದಲ್ಲಿ ನಡೆದಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅಮೃತಸರ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಮಣಿಂದರ್ ಸಿಂಗ್, “ಜನರು ವಿಷಪೂರಿತ ಮದ್ಯ ಸೇವಿಸಿ ಸಾಯುತ್ತಿದ್ದಾರೆ ಎಂಬ ಮಾಹಿತಿಯನ್ನು ನಾವು ಕಳೆದ ರಾತ್ರಿ 9,30 ಗಂಟೆಗೆ ಸ್ವೀಕರಿಸಿದೆವು. ನಾವು ತಕ್ಷಣವೇ ಕಾರ್ಯೋನ್ಮುಖರಾಗಿ, ನಾಲ್ಕು ಮಂದಿಯನ್ನು ಸೆರೆ ಹಿಡಿದೆವು. ಈ ಸಂಬಂಧ, ವಿಷಪೂರಿತ ಮದ್ಯದ ಪ್ರಮುಖ ಸರಬರಾಜುದಾರ ಪರಬ್ಜೀತ್ ಸಿಂಗ್ ನನ್ನು ಬಂಧಿಸಲಾಗಿದೆ. ನಾವು ಆತನನ್ನು ವಿಚಾರಣೆಗೊಳಪಡಿಸಿದಾಗ, ಈ ಜಾಲದ ಪ್ರಮುಖ ಸರಬರಾಜುದಾರ ಸಹಾಬ್ ಸಿಂಗ್ ಎಂಬ ಸಂಗತಿ ತಿಳಿದು ಬಂದಿತು” ಎಂದು ಹೇಳಿದ್ದಾರೆ.
“ನಾವು ಆತನನ್ನೂ ಸೆರೆ ಹಿಡಿದಿದ್ದು, ಯಾವೆಲ್ಲ ಸಂಸ್ಥೆಗಳಿಂದ ಆತ ಈ ವಿಷಪೂರಿತ ಮದ್ಯವನ್ನು ಖರೀದಿಸುತ್ತಿದ್ದ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ. ವಿಷಪೂರಿತ ಮದ್ಯ ಸರಬರಾಜುದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಸೂಚನೆಯನ್ನು ನಾವು ಪಂಜಾಬ್ ಸರಕಾರದಿಂದ ಸ್ವೀಕರಿಸಿದ್ದೇವೆ. ಈ ಸಂಬಂಧ ದಾಳಿಗಳು ಪ್ರಗತಿಯಲ್ಲಿದ್ದು, ವಿಷಪೂರಿತ ಮದ್ಯ ತಯಾರಕರನ್ನೂ ಶೀಘ್ರವೇ ಸೆರೆ ಹಿಡಿಯಲಾಗುವುದು” ಎಂದು ಅವರು ತಿಳಿಸಿದ್ದಾರೆ.
“ಕಠಿಣ ಸೆಕ್ಷನ್ ಗಳಡಿ ಎರಡು ಎಫ್ಐಆರ್ ಗಳನ್ನು ದಾಖಲಿಸಿಕೊಳ್ಳಲಾಗಿದೆ. ಮತ್ತಷ್ಟು ಸಾವುಗಳನ್ನು ತಪ್ಪಿಸಲು, ಈ ವಿಷಪೂರಿತ ಮದ್ಯ ಸೇವಿಸಿರುವ ಇನ್ನಷ್ಟು ಮಂದಿಯ ಪತ್ತೆಗಾಗಿ ನಾವು ಮನೆ ಮನೆ ಬಾಗಿಲಿಗೆ ತೆರಳುತ್ತಿದ್ದೇವೆ. ಈ ಘಟನೆಯಲ್ಲಿ 14 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಆರು ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.







