ಗುಜರಾತ್ | 145 ಪೋಲಿಸರ ಬೆಂಗಾವಲಿನಲ್ಲಿ ಕುದುರೆಯನ್ನೇರಿ ಮದುವೆಗೆ ಆಗಮಿಸಿದ ದಲಿತ ವರ!

ಸಾಂದರ್ಭಿಕ ಚಿತ್ರ
ಅಹ್ಮದಾಬಾದ್: ಗುಜರಾತಿನ ಬನಾಸಕಾಂತಾ ಜಿಲ್ಲೆಯಲ್ಲಿ ದಲಿತ ವರ 145 ಪೋಲಿಸರ ಬೆಂಗಾವಲಿನೊಂದಿಗೆ ಕುದುರೆಯನ್ನೇರಿ ಮೆರವಣಿಗೆಯಲ್ಲಿ ವಿವಾಹಕ್ಕೆ ಆಗಮಿಸುವ ಮೂಲಕ ಹಲವರು ಹುಬ್ಬೇರಿಸುವಂತೆ ಮಾಡಿದ್ದಾನೆ.
ಜಿಲ್ಲೆಯ ಪಾಲನ್ಪುರ ತಾಲೂಕಿನ ಗಡಲವಾಡಾ ಗ್ರಾಮದಲ್ಲಿ ಗುರುವಾರ ಈ ಸಂಭ್ರಮದ ದೃಶ್ಯ ಕಂಡು ಬಂದಿತ್ತು. ವೃತ್ತಿಯಲ್ಲಿ ವಕೀಲರಾಗಿರುವ ಮುಕೇಶ ಪರೇಚಾರ ಮದುವೆಗಾಗಿ ಮಾಡಬೇಕಾಗಿರುವ ಕಾರ್ಯಗಳ ಪಟ್ಟಿಯಲ್ಲಿ ಇತರ ವರರಿಗಿಂತ ಭಿನ್ನವಾಗಿ ಪೋಲಿಸ್ ರಕ್ಷಣೆಯನ್ನು ಕೋರುವುದೂ ಸೇರಿತ್ತು.
ವಿವಾಹ ಮೆರವಣಿಗೆಯಲ್ಲಿ ಅಹಿತಕರ ಘಟನೆ ಸಂಭವಿಸಬಹುದೆಂದು ಆತಂಕ ಪಟ್ಟುಕೊಂಡಿದ್ದ ಪರೇಚಾ (33) ತನ್ನ ಜೀವನದ ಮಹತ್ವಪೂರ್ಣ ದಿನದಂದು ಕುದುರೆ ಸವಾರಿ ಮಾಡಲು ಬಯಸಿದ್ದರಿಂದ ರಕ್ಷಣೆಯನ್ನು ಕೋರಿ ಜ.22ರಂದು ಬನಾಸಕಾಂತಾ ಜಿಲ್ಲಾ ಪೋಲಿಸ್ ಅಧೀಕ್ಷಕರಿಗೆ ಅರ್ಜಿಯನ್ನು ಸಲ್ಲಿಸಿದ್ದರು.
’ನಮ್ಮ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಜನರು ಎಂದಿಗೂ ವರ್ಘೋಡೊ(ವರ ಕುದುರೆ ಸವಾರಿ ಮಾಡುವ ವಿವಾಹ ಪೂರ್ವ ವಿಧಿ) ನಡೆಸಿಲ್ಲ. ನಾನು ವರ್ಘೋಡೊ ನಡೆಸುವ ಮೊದಲ ವರನಾಗಲಿದ್ದೇನೆ. ಈ ಸಂದರ್ಭದಲ್ಲಿ ಅಹಿತಕರ ಘಟನೆ ಸಂಭವಿಸುವ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ ಪೋಲಿಸ್ ರಕ್ಷಣೆಯನ್ನು ನೀಡುವಂತೆ ಕೋರಿಕೊಳ್ಳುತ್ತಿದ್ದೇನೆ ’ಎಂದು ಪರೇಚಾ ಅರ್ಜಿಯಲ್ಲಿ ತಿಳಿಸಿದ್ದರು.
ಗುರುವಾರ ಬಿಗಿ ಪೋಲಿಸ್ ಬಂದೋಬಸ್ತ್ನಲ್ಲಿ ವಿವಾಹ ಮೆರವಣಿಗೆ ನಡೆದಿದ್ದು,ಕುದುರೆ ಸವಾರಿ ಮಾಡುತ್ತಿದ್ದ ಪರೇಚಾ ಹುಮ್ಮಸ್ಸಿನಲ್ಲಿದ್ದರು.
ಮೂವರು ಸಬ್-ಇನ್ಸ್ಪೆಕ್ಟರ್ಗಳು ಮತ್ತು ಓರ್ವ ಇನ್ಸ್ಪೆಕ್ಟರ್ ಸೇರಿದಂತೆ 145 ಸಿಬ್ಬಂದಿಗಳ ಬಂದೋಬಸ್ತ್ ಏರ್ಪಡಿಸಿದ್ದು,ಮೆರವಣಿಗೆ ಶಾಂತಿಯುತವಾಗಿ ನಡೆಯಿತು ಎಂದು ಗಢ ಪೋಲಿಸ್ ಠಾಣಾಧಿಕಾರಿ ಕೆ.ಎಂ.ವಾಸವ ಹೇಳಿದರು.
‘ಪೋಲಿಸರ ರಕ್ಷಣೆಯೊಂದಿಗೆ ವಿವಾಹ ಮೆರವಣಿಗೆ ನಡೆದಿದ್ದು,ನಾನು ಕುದುರೆ ಸವಾರಿ ಮಾಡುತ್ತಿದ್ದಾಗ ಯಾವುದೇ ಅಹಿತಕರ ಘಟನೆ ಸಂಭವಿಸಿರಲಿಲ್ಲ. ಆದರೆ ನಾನು ಕುದುರೆಯಿಂದ ಇಳಿದ ಬಳಿಕ ನನ್ನ ಕಾರಿನಲ್ಲಿ ಕುಳಿತು ಮೆರವಣಿಗೆಯ ಹಿಂದೆ ಸಾಗುತ್ತಿದ್ದಾಗ ಸುಮಾರು 500 ಮೀ.ಸಾಗಿದ್ದಾಗ ಯಾರೋ ನನ್ನ ಕಾರಿಗೆ ಕಲ್ಲೆಸೆದಿದ್ದರು. ಆಗ ಇನ್ಸ್ಪೆಕ್ಟರ್ ವಾಸವ ಅವರೇ ಸ್ವತಃ ಕಾರನ್ನು ಚಲಾಯಿಸಿ ವಿವಾಹ ಸ್ಥಳವನ್ನು ತಲುಪಿದ್ದು,ಸ್ಥಳದಲ್ಲಿದ್ದ ವಡಗಾಂವ ಶಾಸಕ ಜಿಗ್ನೇಶ್ ಮೇವಾನಿ ಅವರೂ ಕಾರಿನೊಳಗೆ ಕುಳಿತರು ’ಎಂದು ಬನಾಸಕಾಂತಾ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ನಡೆಸುತ್ತಿರುವ ಪರೇಚಾ ತಿಳಿಸಿದರು.
ಕಲ್ಲು ತೂರಾಟ ಘಟನೆಯ ಕುರಿತು ಒಂದೆರಡು ದಿನಗಳಲ್ಲಿ ನಾವು ವಿಧ್ಯುಕ್ತ ಪೋಲಿಸ್ ದೂರು ಸಲ್ಲಿಸುತ್ತೇವೆ ಎಂದರು.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28







