ದಿಲ್ಲಿ ಸ್ಫೋಟ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಸಂದೇಶ : ಅಸ್ಸಾಂನಲ್ಲಿ 15 ಮಂದಿ ಬಂಧನ

ಸಾಂದರ್ಭಿಕ ಚಿತ್ರ | Photo Credit : freepik.com
ಗುವಾಹಟಿ, ನ. 13: ದಿಲ್ಲಿಯ ಕೆಂಪು ಕೋಟೆ ಬಳಿ ಸೋಮವಾರ ಸಂಭವಿಸಿದ ಭೀಕರ ಬಾಂಬ್ಸ್ಫೋಟಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಲಾಗಿರುವ ‘‘ಅನುಚಿತ ಸಂದೇಶ’’ಗಳಿಗಾಗಿ ಅಸ್ಸಾಂನಲ್ಲಿ ಇನ್ನೂ ಒಂಭತ್ತು ಮಂದಿಯನ್ನು ಬಂಧಿಸಲಾಗಿದೆ.
‘‘ದಿಲ್ಲಿ ಸ್ಫೋಟಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಲಾಗಿರುವ ಅನುಚಿತ ಸಂದೇಶಗಳಿಗಾಗಿ ಅಸ್ಸಾಂನಲ್ಲಿ ಈವರೆಗೆ 15 ಮಂದಿಯನ್ನು ಬಂಧಿಸಲಾಗಿದೆ. ನಿನ್ನೆ ಆರು ಮಂದಿಯನ್ನು ಬಂಧಿಸಲಾಗಿತ್ತು. ಉಳಿದವರನ್ನು ಕಳೆದ ರಾತ್ರಿ ಬಂಧಿಸಲಾಗಿದೆ’’ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಗುರುವಾರ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಪೊಲೀಸರು ಸ್ವಯಂಪ್ರೇರಿತ ಮೊಕದ್ದಮೆಗಳನ್ನು ದಾಖಲಿಸಿಕೊಂಡು, ಬುಧವಾರ ರಾತ್ರಿ ಮತ್ತು ಗುರುವಾರ ಬೆಳಗ್ಗೆ ವಿವಿಧ ಜಿಲ್ಲೆಗಳಿಂದ ಜನರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ, ಸರಕಾರಿ ಶಾಲೆಯೊಂದರ ನಿವೃತ್ತ ಪ್ರಾಂಶುಪಾಲರನ್ನು ಕಚರ್ ಜಿಲ್ಲೆಯಲ್ಲಿ ಬಂಧಿಸಲಾಗಿತ್ತು. ಅವರಿಗೆ ನೋಟಿಸ್ ಕೊಟ್ಟು ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಕಚರ್ ಪೊಲೀಸ್ ಸೂಪರಿಂಟೆಂಡೆಂಡ್ ಪಾರ್ಥ ಪ್ರತಿಮ್ ದಾಸ್ ಹೇಳಿದರು.





