ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ತೆರವಿಗೆ 15 ದಿನಗಳ ಗಡುವು ನೀಡಿದ ಉತ್ತರ ಪ್ರದೇಶ ಸರ್ಕಾರ
ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ (PTI)
ಲಕ್ನೊ: ದನದ ಮಾಂಸ ಹಾಗೂ ರಫ್ತು ಉದ್ದೇಶದ ಉತ್ಪನ್ನಗಳನ್ನು ಹೊರತುಪಡಿಸಿ ಉಳಿದ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮೇಲೆ ನಿಷೇಧ ಹೇರಿರುವ ಉತ್ತರ ಪ್ರದೇಶ ಸರ್ಕಾರ, ಅಂತಹ ಉತ್ಪನ್ನಗಳೇನಾದರೂ ತಮ್ಮ ಬಳಿ ಉಳಿದಿದ್ದರೆ ಅವುಗಳನ್ನು ತೆರವು ಮಾಡಲು ಮಳಿಗೆಗಳು ಹಾಗೂ ಸೂಪರ್ ಸ್ಟೋರ್ ಗಳಿಗೆ 15 ದಿನಗಳ ಗಡುವನ್ನು ನೀಡಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದರೊಂದಿಗೆ, ಪ್ರಮಾಣೀಕೃತವಲ್ಲದ ಸಂಸ್ಥೆಗಳಿಂದ ಹಲಾಲ್ ಪ್ರಮಾಣ ಪತ್ರ ಪಡೆಯುತ್ತಿರುವ 92 ಉತ್ತರ ಪ್ರದೇಶ ಮೂಲದ ಉತ್ಪಾದಕರಿಗೆ ತಮ್ಮ ಉತ್ಪನ್ನಗಳಿಗೆ ಉತ್ತರ ಪ್ರದೇಶದಲ್ಲೇ ಪ್ರಮಾಣ ಪತ್ರ ಪಡೆಯಬೇಕು ಹಾಗೂ ಆ ಉತ್ಪನ್ನಗಳ ಮರು ಬ್ರ್ಯಾಂಡಿಂಗ್ ಅಥವಾ ಮರು ಪ್ಯಾಕೇಜಿಂಗ್ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದೂ ಆದೇಶಿಸಿದೆ.
ಈ ಕುರಿತು TOI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಇಲಾಖೆಯ ಆಯುಕ್ತೆ ಅನಿತಾ ಸಿಂಗ್, ನವೆಂಬರ್ 18ರಂದು ಉತ್ತರ ಪ್ರದೇಶದಲ್ಲಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮೇಲಿನ ನಿಷೇಧ ಜಾರಿಯಾದಾಗಿನಿಂದ, 92 ದಾಳಿಗಳು ಹಾಗೂ ಸುಮಾರು 500 ಪರಿಶೀಲನೆಗಳನ್ನು ನಡೆಸಲಾಗಿದ್ದು, ರೂ. 7-8 ಲಕ್ಷ ಮೌಲ್ಯದ ಸುಮಾರು 3,000 ಕೆಜಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನುಳಿದ 81 ಆಹಾರ ಮಾದರಿಗಳನ್ನು ಪರೀಕ್ಷೆಗಾಗಿ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿಸಿದ್ದಾರೆ.