ಪ್ರಧಾನಿ ಮೋದಿ 15 ಲಕ್ಷ ರೂ. ಕೊಡುತ್ತಾರೆಂದು ನಾನೂ ಬ್ಯಾಂಕ್ ಖಾತೆ ತೆರೆದಿದ್ದೆ: ವ್ಯಂಗ್ಯವಾಡಿದ ಲಾಲೂ ಯಾದವ್

ಲಾಲೂ ಪ್ರಸಾದ್ ಯಾದವ್ | Photo: PTI
ಮುಂಬೈ: “ಬಿಜೆಪಿಯವರು ನನ್ನ ಮತ್ತು ಇತರ ನಾಯಕರ ದುಡ್ಡು ಸ್ವಿಸ್ ಬ್ಯಾಂಕ್ ನಲ್ಲಿದೆ ಎಂದು ಅಪಪ್ರಚಾರ ಮಾಡಿದರು. ನಾನು ಆ ಕಪ್ಪು ಹಣವನ್ನು ಮರಳಿ ತರುತ್ತೇನೆ ಎಂದು ಪ್ರಧಾನಿ ಮೋದಿ ಕೂಡಾ ಹೇಳಿದರು. ಹೀಗಾಗಿ ಖಾತೆಗಳನ್ನು ತೆರೆಯಲಾಯಿತು ಹಾಗೂ ಪ್ರತಿ ಖಾತೆಗೂ ರೂ. 15 ಲಕ್ಷ ಠೇವಣಿ ಹಾಕುತ್ತೇನೆ ಎಂದು ಮೋದಿ ಹೇಳಿದರು. ನಾನೂ ಕೂಡಾ ಅವರ ಮಾತಿಗೆ ಮೋಸ ಹೋಗಿ ಖಾತೆಯೊಂದನ್ನು ತೆರೆದೆ” ಎಂದು ಆರ್ ಜೆಡಿ ಪಕ್ಷದ ವರಿಷ್ಠ ಲಾಲೂ ಪ್ರಸಾದ್ ಯಾದವ್ ವ್ಯಂಗ್ಯವಾಡಿದ್ದಾರೆ.
INDIA ಮೈತ್ರಿಕೂಟದ ಪಕ್ಷಗಳ ಜಂಟಿ ಪತ್ರಿಕಾಗೋಷ್ಠಿಯು ಲಾಲೂ ಪ್ರಸಾದ್ ಯಾದವ್ ಅವರ ಹಾಸ್ಯಭರಿತ ವಿಶಿಷ್ಟ ವಿಡಂಬನೆಗಳಿಗೆ ಸಾಕ್ಷಿಯಾಯಿತು. ಪತ್ರಿಕಾಗೋಷ್ಠಿಯುದ್ದಕ್ಕೂ ಹಲವು ಹಾಸ್ಯ ಚಟಾಕಿಗಳನ್ನು ಹಾರಿಸಿದ ಲಾಲೂ ಪ್ರಸಾದ್ ಯಾದವ್, ನೆರೆದಿದ್ದವರನ್ನೆಲ್ಲ ನಗೆಗಡಲಲ್ಲಿ ತೇಲಿಸಿದರು.
ಇದೇ ವೇಳೆ, “ಪ್ರಧಾನಿ ನರೇಂದ್ರ ಮೋದಿಯನ್ನು ಸೂರ್ಯಲೋಕಕ್ಕೆ ಕಳಿಸಲು ಇಸ್ರೊ ವಿಜ್ಞಾನಿಗಳು ಸಿದ್ಧವಾಗಬೇಕು” ಎಂದೂ ಅವರು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯುದ್ದಕ್ಕೂ ಲಾಲೂ ಪ್ರಸಾದ್ ಯಾದವ್ ಅವರ ಹಾಸ್ಯ ಚಟಾಕಿಗಳೇ ತುಂಬಿದ್ದರೂ, ಮೈತ್ರಿಕೂಟದ ಪಕ್ಷಗಳ ನಡುವಿನ ಸೀಟು ಹಂಚಿಕೆಯ ಕುರಿತೂ ಗಂಭೀರ ಸಂದೇಶವನ್ನು ರವಾನಿಸಲಾಯಿತು. ಮೈತ್ರಿಕೂಟದ ಪಕ್ಷಗಳಿಗೆ ಬಯಸಿದ್ದೆಲ್ಲ ದೊರೆಯದಿದ್ದರೂ, ಪರಸ್ಪರ ಸೀಟು ಹಂಚಿಕೆಯನ್ನು ಸುಗಮವಾಗಿ ಅಂತಿಮಗೊಳಿಸಲಾಗುವುದು ಎಂದು ಮೈತ್ರಿಕೂಟದ ನಾಯಕರು ಪ್ರತಿಪಾದಿಸಿದರು.
“ನಾವು ಈ ಹೋರಾಟವನ್ನು ಪ್ರಬಲವಾಗಿ ನಡೆಸುತ್ತೇವೆ, ನಾವೆಲ್ಲರೂ ಒಗ್ಗಟ್ಟಾಗಿರುತ್ತೇವೆ, ಹೊಂದಾಣಿಕೆಯಿಂದ ಇರುತ್ತೇವೆ, ನಷ್ಟ ಸಂಭವಿಸುವಂತಿದ್ದರೂ ಸೀಟು ಹಂಚಿಕೆಯಲ್ಲಿ ಯಾವುದೇ ಸಮಸ್ಯೆ ಅಥವಾ ತೊಡಕುಂಟಾಗದಂತೆ ನೋಡಿಕೊಳ್ಳುತ್ತೇವೆ, INDIA ಮೈತ್ರಿಕೂಟದ ಬಲವರ್ಧನೆ ಮಾಡುತ್ತೇವೆ ಹಾಗೂ ದೇಶವನ್ನು ರಕ್ಷಿಸಲು ಮೋದಿಯನ್ನು ಅಧಿಕಾರದಿಂದ ತೆಗೆಯುತ್ತೇವೆ ಎಂಬ ಭರವಸೆಯನ್ನು ರಾಹುಲ್ ಗಾಂಧಿಗೆ ನೀಡಲು ನಾನು ಬಯಸುತ್ತೇನೆ” ಎಂದು ಲಾಲೂ ಪ್ರಸಾದ್ ಯಾದವ್ ಹೇಳಿದರು.
ವಿರೋಧ ಪಕ್ಷಗಳ ಮೈತ್ರಿಕೂಟವಾದ INDIAದ ನಾಯಕರು ಎಷ್ಟು ಸಾಧ್ಯವೋ, ಅಷ್ಟು ಒಗ್ಗಟ್ಟಿನಿಂದ 2024ರ ಚುನಾವಣೆಯನ್ನು ಎದುರಿಸಲು ಶುಕ್ರವಾರ ತೀರ್ಮಾನಿಸಿದ್ದಾರೆ. ‘ಕೊಡು-ಕೊಳ್ಳುವ’ ಸಹಭಾಗಿತ್ವ ಸ್ಫೂರ್ತಿಯೊಂದಿಗೆ ಆದಷ್ಟೂ ಶೀಘ್ರವಾಗಿ ರಾಜ್ಯ ಮಟ್ಟದಲ್ಲಿನ ಸೀಟು ಹಂಚಿಕೆಯನ್ನು ಅಂತಿಮಗೊಳಿಸುತ್ತೇವೆ ಎಂದು INDIA ನಾಯಕರು ಹೇಳಿಕೊಂಡಿದ್ದಾರೆ.







