ಛತ್ತೀಸ್ಗಢ | ಭದ್ರತಾ ಪಡೆಗಳಿಂದ ಜಂಟಿ ಕಾರ್ಯಾಚರಣೆ : 15 ನಕ್ಸಲರ ಹತ್ಯೆ

ಸಾಂದರ್ಭಿಕ ಚಿತ್ರ (PTI)
ರಾಯ್ಪುರ: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿ ಕನಿಷ್ಠ 15 ನಕ್ಸಲರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಬಸ್ತಾರ್ನಲ್ಲಿ ನಕ್ಸಲರ ವಿರುದ್ಧ ನಡೆಸಿದ ಅತಿದೊಡ್ಡ ಕಾರ್ಯಾಚರಣೆಯಲ್ಲಿ ಛತ್ತೀಸ್ಗಢ ಪೊಲೀಸ್ ಜಿಲ್ಲಾ ಮೀಸಲು ಪಡೆ, ಬಸ್ತಾರ್ ಫೈಟರ್ಸ್, ವಿಶೇಷ ಕಾರ್ಯಪಡೆ (STF), ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಕೋಬ್ರಾ ಘಟಕ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ. ಹತ್ಯೆಯಾದ ಮಾವೋವಾದಿಗಳ ಸಂಖ್ಯೆ ಹೆಚ್ಚಳವಾಗಬಹುದು, ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ʼಬುಧವಾರ ಬೆಳಗಿನ ಜಾವ ಎನ್ಕೌಂಟರ್ ನಡೆದಿದೆ. ಛತ್ತೀಸ್ಗಢ-ತೆಲಂಗಾಣ ಗಡಿಯಲ್ಲಿರುವ ಕರ್ರೆಗುಟ್ಟ ಬೆಟ್ಟಗಳ ಸುತ್ತಲಿನ ದಟ್ಟ ಕಾಡುಗಳಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ 15ಕ್ಕೂ ಅಧಿಕ ಮಾವೋವಾದಿಗಳನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದೆ. ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಈ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲಾಗುವುದುʼ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.







