ಬೈಜೂಸ್ ನಿಂದ 158 ಕೋಟಿ ರೂ. ಪಾವತಿ ಕೋರಿ ಎನ್ಸಿಎಲ್ಟಿಗೆ ಬಿಸಿಸಿಐ ದೂರು
Photo: PTI
ಮುಂಬೈ: ದಿವಾಳಿ ಪ್ರಕರಣಗಳನ್ನು ನಿಭಾಯಿಸುವ ನ್ಯಾಯಮಂಡಳಿ ಎನ್ಸಿಎಲ್ಟಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಲ್ಲಿಸಿದ ದೂರಿನ ಆಧಾರದಲ್ಲಿ ತಿಂಕ್ ಆ್ಯಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ ಗೆ ನೋಟಿಸ್ ಜಾರಿಗೊಳಿಸಿದೆ. ತಿಂಕ್ ಆ್ಯಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್, ‘ಬೈಜೂಸ್’ ಎಂಬ ಬ್ರಾಂಡ್ ಹೆಸರಿನಲ್ಲಿ ಆನ್ಲೈನ್ ಶಿಕ್ಷಣ ಸೇವೆಗಳನ್ನು ನೀಡುತ್ತಿದೆ.
ತನಗೆ ನೀಡಬೇಕಾಗಿರುವ 158 ಕೋಟಿ ರೂಪಾಯಿ ಮೊತ್ತವನ್ನು ಪಾವತಿಸುವಂತೆ ಬೈಜೂಸ್ ಗೆ ನಿರ್ದೇಶನ ನೀಡುವಂತೆ ಕೋರಿ ಬಿಸಿಸಿಐ ದೂರು ಸಲ್ಲಿಸಿದೆ. ಈ ದೂರನ್ನು ವಿಚಾರಣೆಗೆ ಪರಿಗಣಿಸಿರುವ ಬೆಂಗಳೂರಿನ ಇಬ್ಬರು ಸದಸ್ಯರ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್ಸಿಟಿಎಲ್)ಯು ತಿಂಕ್ ಆ್ಯಂಡ್ ಲರ್ನ್ಗೆ ನವೆಂಬರ್ 28ರಂದು ನೋಟಿಸ್ ಜಾರಿಗೊಳಿಸಿದೆ.
‘‘ಪ್ರತಿವಾದಿ ಬೈಜೂಸ್ ಗೆ ಉತ್ತರ ನೀಡಲು ಎರಡು ವಾರಗಳ ಸಮಯಾವಕಾಶ ನೀಡಲಾಗಿದೆ ಮತ್ತು ಇದಕ್ಕೆ ಪ್ರತಿಕ್ರಿಯೆ ನೀಡಲು ಅರ್ಜಿದಾರ ಬಿಸಿಸಿಐಗೆ ಒಂದು ವಾರ ನೀಡಲಾಗಿದೆ’’ ಎಂದು ಎನ್ಸಿಎಲ್ಟಿ ಆದೇಶವು ತಿಳಿಸಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಅದು ಡಿಸೆಂಬರ್ 22ಕ್ಕೆ ನಿಗದಿಪಡಿಸಿದೆ.
ಬೈಜೂಸ್ ಬಿಸಿಸಿಐಯ ಪ್ರಾಯೋಜಕ ಮಂಡಳಿಗೆ 2019ರಲ್ಲಿ ಸೇರ್ಪಡೆಗೊಂಡಿತ್ತು.