1984 ಸಿಖ್ ವಿರೋಧಿ ದಂಗೆ: ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಜಾಮೀನು ಬಾಂಡ್ ಸ್ವೀಕರಿಸಿದ ದಿಲ್ಲಿ ನ್ಯಾಯಾಲಯ

ಹೊಸದಿಲ್ಲಿ: 1984 ರ ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ನಡೆದ ಪುಲ್ ಬಂಗಾಶ್ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರು ಸಲ್ಲಿಸಿದ ಜಾಮೀನು ಬಾಂಡ್ ಅನ್ನು ದಿಲ್ಲಿ ನ್ಯಾಯಾಲಯ ಇಂದು ಸ್ವೀಕರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 26 ರಂದು ಟೈಟ್ಲರ್ ಗೆ ಸಮನ್ಸ್ ನೀಡಿದ್ದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಧಿ ಗುಪ್ತಾ ಆನಂದ್, ಆರೋಪಿಗೆ ಈಗಾಗಲೇ ಸೆಷನ್ಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿದೆ ಎಂಬುದನ್ನು ಗಮನಿಸಿದರು.
ನ್ಯಾಯಾಲಯವು ಜಗದೀಶ್ ಟೈಟ್ಲರ್ ಅವರಿಗೆ ಚಾರ್ಜ್ ಶೀಟ್ ನ ಪ್ರತಿಯನ್ನು ನೀಡುವಂತೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶನ ನೀಡಿದೆ.
ಹೆಚ್ಚಿನ ಭದ್ರತೆಯ ನಡುವೆ ಕಾಂಗ್ರೆಸ್ ನಾಯಕ ನ್ಯಾಯಾಲಯದ ಮುಂದೆ ಹಾಜರಾದರು.
"ಜಾಮೀನು ಬಾಂಡ್ ಅನ್ನು ಒದಗಿಸಲಾಗಿದೆ. ಜಾಮೀನು ಆದೇಶದ ಮೇಲೆ ವಿಧಿಸಲಾದ ಷರತ್ತುಗಳಿಗೆ ಒಳಪಟ್ಟು ಸ್ವೀಕರಿಸಲಾಗಿದೆ" ಎಂದು ಮ್ಯಾಜಿಸ್ಟ್ರೇಟ್ ಹೇಳಿದರು.
ಈ ಪ್ರಕರಣದಲ್ಲಿ ಜಗದೀಶ್ ಟೈಟ್ಲರ್ ಅವರ ಪತ್ನಿ ಜೆನ್ನಿಫರ್ ಟೈಟ್ಲರ್ ಅವರಿಗೆ ಶ್ಯೂರಿಟಿ ಒದಗಿಸಿದ್ದಾರೆ.
ನ್ಯಾಯಾಲಯವು ಜೆನ್ನಿಫರ್ ಅವರ ಗುರುತು ಮತ್ತು ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಿತು. ಅವರು ಆರ್ಥಿಕವಾಗಿ ಸ್ವತಂತ್ರಳಾಗಿರುವುದನ್ನು ಗಮನಿಸಿದ ಬಳಿಕ ಶ್ಯೂರಿಟಿಯಾಗಿ ಸ್ವೀಕರಿಸಿತು.
ನ್ಯಾಯಾಧೀಶರು ಆಗಸ್ಟ್ 11 ರಂದು ವಿಚಾರಣೆ ನಡೆಸಲಿದ್ದಾರೆ.
ಶುಕ್ರವಾರ, ಸೆಷನ್ಸ್ ನ್ಯಾಯಾಲಯವು 1 ಲಕ್ಷದ ವೈಯಕ್ತಿಕ ಬಾಂಡ್ ಹಾಗೂ ಅಂತಹ ಮೊತ್ತದ ಒಂದು ಶ್ಯೂರಿಟಿಯ ಮೇಲೆ ಜಗದೀಶ್ ಟೈಟ್ಲರ್ ಗೆ ನಿರೀಕ್ಷಣಾ ಜಾಮೀನು ನೀಡಿತು. ಅಲ್ಲದೆ ಪ್ರಕರಣದ ಸಾಕ್ಷ್ಯವನ್ನು ಹಾಳು ಮಾಡಬಾರದು ಅಥವಾ ಅನುಮತಿ ಇಲ್ಲದೆ ದೇಶ ಬಿಟ್ಟು ಹೋಗಬಾರದು ಎಂಬುದೂ ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಿದೆ.







