1984ರ ಭೋಪಾಲ್ ಅಗ್ನಿ ದುರಂತ | ಪಿತಾಂಪುರ್ ನಲ್ಲಿ ತ್ಯಾಜ್ಯ ವಿಸರ್ಜನೆ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ
ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರಕಾರ, ಮಧ್ಯಪ್ರದೇಶ ಹಾಗೂ ರಾಜ್ಯ ಮಾಲಿನ್ಯ ಮಂಡಳಿಗೆ ನೋಟಿಸ್ ಜಾರಿ

PC : PTI
ಹೊಸದಿಲ್ಲಿ : 5,479 ಜನರ ಸಾವಿಗೆ ಕಾರಣವಾಗಿದ್ದ 1984ರ ಭೋಪಾಲ್ ಅನಿಲ ದುರಂತದ ಅಪಾಯಕಾರಿ ತ್ಯಾಜ್ಯಗಳನ್ನು ಇಂದೋರ್ ಬಳಿ ವಿಸರ್ಜಿಸುತ್ತಿರುವ ಕುರಿತು ಸೋಮವಾರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರಕಾರ, ಮಧ್ಯಪ್ರದೇಶ ಹಾಗೂ ಅದರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್ ಜಾರಿಗೊಳಿಸಿದೆ.
ಸದ್ಯ ನಿಷ್ಕ್ರಿಯವಾಗಿರುವ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಸುಮಾರು 377 ಟನ್ ಅಪಾಯಕಾರಿ ತ್ಯಾಜ್ಯವನ್ನು ಭೋಪಾಲ್ ನಿಂದ 250 ಕಿಮೀ ಹಾಗೂ ಇಂದೋರ್ ನಿಂದ ಸುಮಾರು 30 ಕಿಮೀ ದೂರವಿರುವ ಧಾರ್ ಜಿಲ್ಲೆಯ ಪಿತಾಂಪುರ್ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಆರೋಗ್ಯ ಹಕ್ಕು ಹಾಗೂ ಇಂದೋರ್ ನಗರ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳಿಗೆ ಆಗಲಿರುವ ಸಂತಾನೋತ್ಪತ್ತಿ ಅಪಾಯದ ಕುರಿತು ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿತು.
ಡಿಸೆಂಬರ್ 2, 1984ರ ಮಧ್ಯರಾತ್ರಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ತೀವ್ರ ವಿಷಕಾರಿ ಅನಿಲವಾದ ಮೀಥೈಲ್ ಐಸೊಸಯನೇಟ್ ಸೋರಿಕೆಯಾಗಿ, 5,479 ಮಂದಿ ಮೃತಪಟ್ಟಿದ್ದರು ಹಾಗೂ ಐದು ಲಕ್ಷಕ್ಕೂ ಹೆಚ್ಚು ಮಂದಿ ಅಂಗವೈಕಲ್ಯಕ್ಕೆ ತುತ್ತಾಗಿದ್ದರು. ಈ ದುರಂತವನ್ನು ವಿಶ್ವದ ಅತ್ಯಂತ ಕೆಟ್ಟ ಕೈಗಾರಿಕಾ ದುರಂತ ಎಂದೇ ಇತಿಹಾಸದಲ್ಲಿ ಪರಿಗಣಿಸಲಾಗಿದೆ.
ಈ ಅನಿಲ ದುರಂತ ನಡೆದು 40 ವರ್ಷಗಳಾದರೂ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಆವರಣದಲ್ಲಿನ ತ್ಯಾಜ್ಯಗಳನ್ನು ವಿಲೇವಾರಿ ಮಾಡದ ಪ್ರಾಧಿಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಮಧ್ಯಪ್ರದೇಶ ಹೈಕೋರ್ಟ್, ಇನ್ನು ನಾಲ್ಕು ವಾರಗಳೊಳಗೆ ತ್ಯಾಜ್ಯಗಳನ್ನು ವಿಲೇವಾರಿ ಮಾಡದಿದ್ದರೆ, ನ್ಯಾಯಾಂಗ ನಿಂದನೆ ಕ್ರಮವನ್ನು ಜರುಗಿಸಲಾಗುವುದು ಎಂದು ಎಚ್ಚರಿಸಿತ್ತು. ಇದರ ಬೆನ್ನಿಗೇ ಜನವರಿ 1ರಂದು ಮೊಹರು ಮಾಡಿದ 12 ಕಂಟೈನರ್ ಟ್ರಕ್ ಗಳಲ್ಲಿ ಅಪಾಯಕಾರಿ ತ್ಯಾಜ್ಯದ ಸ್ಥಳಾಂತರ ಪ್ರಾರಂಭಗೊಂಡಿತ್ತು.
ಡಿಸೆಂಬರ್ 3, 2024 ಹಾಗೂ ಜನವರಿ 6, 2025ರಂದು ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ಈ ಆದೇಶಗಳನ್ನು ಪ್ರಶ್ನಿಸಿ ವಕೀಲ ಸರ್ವಮ್ ರಿತಮ್ ಖರೆ ಮೂಲಕ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ನ್ಯಾ. ಬಿ.ಆರ್.ಗವಾಯಿ ಹಾಗೂ ನ್ಯಾ. ಆಗಸ್ಟಿನ್ ಜಾರ್ಜ್ ಮಾಸಿಹ್ ಅವರನ್ನೊಳಗೊಂಡಿದ್ದ ನ್ಯಾಯಪೀಠ ಸಮ್ಮತಿಸಿದೆ.







