ಕೇರಳ | ಕೊಚ್ಚಿ ಕಲಾ ಗ್ಯಾಲರಿಯಲ್ಲಿ ಅಲ್ಜೀರಿಯಾ-ಫ್ರೆಂಚ್ ಕಲಾವಿದೆಯ ಕಲಾಕೃತಿಗಳಿಗೆ ಹಾನಿ : ಇಬ್ಬರ ವಿರುದ್ಧ ಪ್ರಕರಣ ದಾಖಲು

Photo credit: mathrubhumi.com)
ಕೊಚ್ಚಿ: ಕೇರಳದ ಕೊಚ್ಚಿಯ ದರ್ಬಾರ್ ಹಾಲ್ ಆರ್ಟ್ ಗ್ಯಾಲರಿಯಲ್ಲಿ ಅಲ್ಜೀರಿಯಾ-ಫ್ರೆಂಚ್ ಕಲಾವಿದೆ ಹನನ್ ಬೆನಮ್ಮರ್ ಅವರ ಕಲಾಕೃತಿಗಳನ್ನು ಧ್ವಂಸಗೊಳಿಸಿದ್ದಕ್ಕಾಗಿ ಕೇರಳ ಪೊಲೀಸರು ಇಬ್ಬರು ಕಲಾವಿದರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅಂತಾರಾಷ್ಟ್ರೀಯ 'ಎಸ್ಟ್ರೇಂಜ್ಡ್ ಜಿಯೋಗ್ರಫೀಸ್' ಕಲಾ ಪ್ರದರ್ಶನದ ಭಾಗವಾಗಿ ಪ್ರದರ್ಶಿಸಲಾದ ಬೆನಮ್ಮರ್ ಅವರ 7 ಲಿನೋಕಟ್ ಗ್ರಾಫಿಕ್ ಮುದ್ರಣಗಳನ್ನು ಕಲಾವಿದರಾದ ಹೊಚಿಮಿನ್ ಪಿ ಎಚ್ ಮತ್ತು ಸುದಂಶು ಅವರು ಅಶ್ಲೀಲವಾಗಿದೆ ಎಂದು ಆರೋಪಿಸಿ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕೇರಳ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಮುರಳಿ ಚೀರೋತ್ ಅವರ ದೂರಿನ ಆಧಾರದ ಮೇಲೆ ಕೊಚ್ಚಿ ನಗರ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 329 (3), 324(4) ಮತ್ತು 3(5)ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಆರೋಪಿಗಳು ಕಲಾ ಗ್ಯಾಲರಿಗೆ ಅತಿಕ್ರಮಣ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಕಲಾವಿದೆಯ ಕಲಾಕೃತಿಯನ್ನು ನಾಶಪಡಿಸಿದ್ದಾರೆ ದೂರಿನಲ್ಲಿ ಆರೋಪಿಸಲಾಗಿದೆ.





